ಓವರ್ಟೇಕಿಂಗ್ ಪ್ರತಿ ದಿನ ನಡೆಯುತ್ತಿರುತ್ತದೆ, ಅದು ಯಾವಾಗಲೂ ದುಡುಕಿನ ಚಾಲನೆಯಲ್ಲ: ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ,ಆ.17: 30 ವರ್ಷಗಳ ಹಿಂದೆ ಅಪಘಾತದಲ್ಲಿ ಪತ್ನಿಯನ್ನು ಕಳೆದುಕೊಂಡಿದ್ದ ವ್ಯಕ್ತಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಿರುವ ಸರ್ವೋಚ್ಚ ನ್ಯಾಯಾಲಯವು, ಭಾರತದ ರಸ್ತೆಗಳಲ್ಲಿ ಓವರ್ ಟೇಕಿಂಗ್ ದೈನಂದಿನ ಘಟನೆಯಾಗಿದೆ ಮತ್ತು ಅದು ಯಾವಾಗಲೂ ದುಡುಕಿನ ಚಾಲನೆಯಲ್ಲದಿರಬಹುದು ಎಂದು ಹೇಳಿದೆ.
ತನ್ನ ಪತ್ನಿಯ ಸಾವಿಗೆ ಕಾರಣವಾಗಿದ್ದ ನಿರ್ಲಕ್ಷ್ಯದಲ್ಲಿ ವ್ಯಕ್ತಿಯ ಪಾಲಿತ್ತು ಎನ್ನುವ ಅಭಿಪ್ರಾಯವನ್ನು ನ್ಯಾಯಮೂರ್ತಿಗಳಾದ ಸಿ.ಟಿ.ರವಿಕುಮಾರ ಮತ್ತು ಸಂಜಯ ಕರೋಲ್ ಅವರ ಪೀಠವು ತಳ್ಳಿಹಾಕಿತು.
ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಪ್ರೇಮಲಾಲ ಆನಂದ ಮತ್ತು ಅವರ ಪತ್ನಿ ಸ್ನೇಹಿತನನ್ನು ಭೇಟಿಯಾಗಲು ದ್ವಿಚಕ್ರ ವಾಹನದಲ್ಲಿ ನೊಯ್ಡಾಕ್ಕೆ ಪ್ರಯಾಣಿಸುತ್ತಿದ್ದಾಗ ಮೆಹರೌಲಿ ಬಳಿ ಟ್ರ್ಯಾಕ್ಟರ್ ಢಿಕ್ಕಿ ಹೊಡೆದಿತ್ತು. ಪತ್ನಿ ಮೃತಪಟ್ಟಿದ್ದರೆ ಆನಂದ ಗಂಭೀರವಾಗಿ ಗಾಯಗೊಂಡಿದ್ದರು.
ವ್ಯಕ್ತಿಯೋರ್ವ ತನ್ನ ಮುಂದಿದ್ದ ವಾಹನವೊಂದನ್ನು ಹಿಂದಿಕ್ಕಲು ಪ್ರಯತ್ನಿಸಿದ್ದ ಎಂಬ ಮಾತ್ರಕ್ಕೆ ಅದನ್ನು ದುಡುಕಿನ ಅಥವಾ ನಿರ್ಲಕ್ಷ್ಯದ ಚಾಲನೆ ಎಂದು ಹೇಳುವಂತಿಲ್ಲ. ಅಲ್ಲದೆ ಅವರು ತನ್ನ ಕುಟುಂಬ ಸದಸ್ಯೆಯನ್ನು ಕಳೆದುಕೊಂಡಿದ್ದಾರೆ. ಓವರ್ಟೇಕಿಂಗ್ ರಸ್ತೆಗಳಲ್ಲಿ ನಡೆಯುವ ದೈನಂದಿನ ಘಟನೆಯಾಗಿದೆ ಮತ್ತು ಆನಂದ ಕೂಡ ಇದನ್ನೇ ಮಾಡಿದ್ದರು ಮತ್ತು ಸ್ವತಃ ಗಾಯಗೊಂಡಿದ್ದರು ಎಂದು ಹೇಳಿದ ನ್ಯಾಯಾಲಯವು,ಮೋಟರ್ ಅಪಘಾತಗಳ ನ್ಯಾಯಮಂಡಳಿಯು ಪ್ರಕಟಿಸಿದ್ದ 1.01 ಲಕ್ಷ ರೂ.ಗಳ ಪರಿಹಾರವನ್ನು 11.25 ಲಕ್ಷ ರೂ.ಗಳಿಗೆ ಹೆಚ್ಚಿಸಿತು.