ತರಕಾರಿ ಬೆಲೆ ಏರಿಕೆಗೆ ಮುಸ್ಲಿಮರನ್ನು ದೂಷಿಸಿದ ಅಸ್ಸಾಂ ಸಿಎಂಗೆ ಉವೈಸಿ ತಿರುಗೇಟು
ಅಸದುದ್ದೀನ್ ಉವೈಸಿ / ಹಿಮಂತ ಬಿಸ್ವಾ ಶರ್ಮ (PTI)
ಹೊಸದಿಲ್ಲಿ: ತಮ್ಮ ವೈಯಕ್ತಿಕ ವೈಫಲಗಳಿಗೂ ಅವರು ಮುಸ್ಲಿಮರನ್ನು ದೂಷಿಸುತ್ತಾರೆ ಎಂದು ಶುಕ್ರವಾರ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಗೆ ತಿರುಗೇಟು ನೀಡಿದ್ದಾರೆ.
ಮುಸ್ಲಿಂ ವರ್ತಕರು ತರಕಾರಿ ಬೆಲೆಗಳನ್ನು ಏರಿಸುತ್ತಿದ್ದಾರೆ. ಒಂದು ವೇಳೆ ಅಸ್ಸಾಮಿಗಳು ತರಕಾರಿ ಮಾರಾಟ ಮಾಡಿರುತ್ತಿದ್ದರೆ ಅವರು ಅಸ್ಸಾಂ ಜನರಿಗೆ ದುಬಾರಿ ದರ ವಿಧಿಸುತ್ತಿರಲಿಲ್ಲ ಎಂದು ಶುಕ್ರವಾರ ಹಿಮಂತ ಬಿಸ್ವಾ ಶರ್ಮ ಹೇಳುವ ಮೂಲಕ ಭಾರಿ ವಿವಾದ ಸೃಷ್ಟಿಸಿದ್ದರು.
"ತರಕಾರಿ ಬೆಲೆಗಳನ್ನು ಇಷ್ಟು ಏರಿಕೆ ಮಾಡಿರುವುದು ಯಾರು? ಅವರು ತರಕಾರಿಗಳನ್ನು ದುಬಾರಿ ಬೆಲೆಗೆ ಮಾರುತ್ತಿರುವ ಮಿಯಾ ವ್ಯಾಪಾರಿಗಳು" ಎಂದು ಶರ್ಮ ಹೇಳಿದ್ದಾರೆ ಎಂದು ವರದಿಯಾಗಿದೆ.
ಸ್ಥಳೀಯ ಭಾಷೆಯಲ್ಲಿ 'ಮಿಯಾ' ಎಂದರೆ ಅಸ್ಸಾಂನಲ್ಲಿ ವಾಸಿಸುತ್ತಿರುವ ಬಂಗಾಳಿ ಭಾಷೆ ಮಾತನಾಡುವ ಮುಸ್ಲಿಮರಾಗಿದ್ದು, ಅವರು ಮೂಲತಃ ಬಾಂಗ್ಲಾದೇಶದಿಂದ ವಲಸೆ ಬಂದಿರುವವರು ಎಂಬ ಭಾವನೆಯಿದೆ. 'ಮಿಯಾ' ಸಮುದಾಯ ಕೋಮುವಾದಿ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಪದೇ ಪದೇ ಆರೋಪಿಸುತ್ತಿರುತ್ತಾರೆ. ಅವರು ಹೊರಗಿನವರು ಎಂದೂ ದೂರುವ ಶರ್ಮ, ಅವರು ಅಸ್ಸಾಮಿಗಳ ಸಂಸ್ಕೃತಿ ಹಾಗೂ ಭಾಷೆಯನ್ನು ಹಾಳುಗೆಡವಲು ಯತ್ನಿಸುತ್ತಿದ್ದಾರೆ ಎಂದೂ ಹೇಳುತ್ತಿರುತ್ತಾರೆ.
BBC ಸುದ್ದಿ ಸಂಸ್ಥೆಯ ವರದಿ ಪ್ರಕಾರ, "ತರಕಾರಿಗಳ ಬೆಲೆ ಗ್ರಾಮೀಣ ಭಾಗಗಳಲ್ಲಿ ಅಗ್ಗವಾಗಿದ್ದರೂ, ಗುವಾಹಟಿಯಲ್ಲಿ ಮಿಯಾ ವ್ಯಾಪಾರಿಗಳು ಅಸ್ಸಾಮಿಗಳಿಗೆ ದುಬಾರಿ ದರ ವಿಧಿಸುತ್ತಿದ್ದಾರೆ. ಇಂದೇನಾದರೂ ಅಸ್ಸಾಮಿ ವ್ಯಾಪಾರಿಗಳು ತರಕಾರಿ ವ್ಯಾಪಾರ ಮಾಡುತ್ತಿದ್ದಿದ್ದರೆ, ಅವರು ಖಂಡಿತ ಅಸ್ಸಾಮಿ ಜನರಿಗೆ ದುಬಾರಿ ದರ ವಿಧಿಸುತ್ತಿರಲಿಲ್ಲ" ಎಂದು ಹೇಳಿದ್ದಾರೆ ಎನ್ನಲಾಗಿದೆ.
ಅದಕ್ಕೆ ಪ್ರತಿಯಾಗಿ, ಎಐಎಂಐಎಂ ಪಕ್ಷದ ಅಧ್ಯಕ್ಷ ಉವೈಸಿ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, "ಒಂದು ವೇಳೆ ಅವರ ಮನೆಯಲ್ಲಿನ ಹಸು ಹಾಲು ನೀಡದಿದ್ದರೆ ಅಥವಾ ಕೋಳಿ ಮೊಟ್ಟೆ ಇಡದಿದ್ದರೆ ಅದಕ್ಕೂ ಮಿಯಾಗಳನ್ನು ದೂಷಿಸುವ ಭಜನಾ ಮಂಡಳಿ ದೇಶದಲ್ಲಿದೆ. ಬಹುಶಃ ಅವರು ತಮ್ಮ ವೈಯಕ್ತಿಕ ವೈಫಲಗಳಿಗೂ ಮಿಯಾ ವ್ಯಾಪಾರಿಗಳನ್ನೇ ದೂಷಿಸುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ತೀಕ್ಷ್ಣ ವಾಗ್ದಾಳಿ ನಡೆಸಿರುವ ಎಐಎಂಐಎಂ ಮುಖ್ಯಸ್ಥ, ವಿದೇಶಿ ಮುಸ್ಲಿಮರೊಂದಿಗೆ ಪ್ರಧಾನಿಯವರು ಆಳವಾದ ಗೆಳೆತನ ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಮುಸ್ಲಿಂ ಬಾಹುಳ್ಯವಿರುವ ದೇಶಗಳಿಗೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯನ್ನು ಉಲ್ಲೇಖಿಸಿರುವ ಉವೈಸಿ, "ಅವರ ಬಳಿ ಟೊಮೆಟೊ, ಸ್ಪಿನಾಕ್, ಆಲೂಗಡ್ಡೆ ಇತ್ಯಾದಿಗಳನ್ನು ಕೋರುವ ಮೂಲಕ ಅವರನ್ನು ಸಂಭಾಳಿಸಿ" ಎಂದು ಕುಹಕವಾಡಿದ್ದಾರೆ.