ಪ.ಬಂ: ಬಿಜೆಪಿ- ಟಿಎಂಸಿ ಸದಸ್ಯರ ನಡುವೆ ಘರ್ಷಣೆ, ಓರ್ವನ ಸಾವು, ಐವರಿಗೆ ಗಾಯ
ಕೋಲ್ಕತಾ: ಪಶ್ಚಿಮ ಬಂಗಾಳದ ಕೂಚ್ಬೆಹಾರ್ ಜಿಲ್ಲೆಯ ದಿನಹಾಟಾ ಪಟ್ಟಣದಲ್ಲಿ ಮಂಗಳವಾರ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಸದಸ್ಯರ ನಡುವೆ ಘರ್ಷಣೆ ನಡೆದಿದೆ. ಓರ್ವ ವ್ಯಕ್ತಿ ಗುಂಡೇಟಿನಿಂದ ಮೃತಪಟ್ಟಿದ್ದು, ಇತರ ಐವರು ಗಾಯಗೊಂಡಿದ್ದಾರೆ.
ಬಿಜೆಪಿ ಸದಸ್ಯರು ತನ್ನ ಕಾರ್ಯಕರ್ತರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆಂದು ಟಿಎಂಸಿ ಆರೋಪಿಸಿದೆ. ಬಿಜೆಪಿ ಆರೋಪವನ್ನು ನಿರಾಕರಿಸಿದೆ.
ಗಿತಾಲ್ಡಾದ ಜರಿ ಧರ್ಲಾ ಪ್ರದೇಶದಲ್ಲಿ ಎರಡು ಸ್ಥಳೀಯ ಗುಂಪುಗಳ ನಡುವೆ ಗುಂಡು ಹಾರಾಟ ನಡೆದಿರುವುದು ವರದಿಯಾಗಿದೆ. ಪ್ರಾಥಮಿಕ ವರದಿಗಳಂತೆ ಐವರು ಗುಂಡೇಟಿನಿಂದ ಗಾಯಗೊಂಡಿದ್ದು,ಈ ಪೈಕಿ ಬಾಬು ಹಕ್ ಎಂಬಾತ ಮೃತಪಟ್ಟಿದ್ದಾನೆ ಎಂದು ತಿಳಿಸಿದ ಕೂಚ್ಬೆಹಾರ್ ಎಸ್ಪಿ ಸುಮಿತ ಕುಮಾರ್ ಅವರು,ಘರ್ಷಣೆಯ ಹಿಂದಿನ ಕಾರಣ ಇನ್ನಷ್ಟೇ ಗೊತ್ತಾಗಬೇಕಿದೆ ಎಂದರು.
ತನ್ನ ಪಕ್ಷದ ಕಾರ್ಯಕರ್ತರು ಜು.8ರಂದು ರಾಜ್ಯದಲ್ಲಿ ನಡೆಯಲಿರುವ ಪಂಚಾಯತ್ ಚುನಾವಣೆಗಾಗಿ ಪ್ರಚಾರ ನಡೆಸಿದ ಬಳಿಕ ಮನೆಯೊಂದರಲ್ಲಿ ನಿದ್ರಿಸಿದ್ದಾಗ ಬಿಜೆಪಿ ಬೆಂಬಲಿತ ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ಟಿಎಂಸಿಯ ದಿನಹಾಟಾ ಘಟಕದ ಅಧ್ಯಕ್ಷ ಅನಾರುಲ್ ಹಕ್ ಆರೋಪಿಸಿದರು. ಓರ್ವ ಕಾರ್ಯಕರ್ತನಿಗೆ ಗುಂಡಿಟ್ಟು ಹರಿತವಾದ ಆಯುಧಗಳಿಂದ ಇರಿಯಲಾಗಿದ್ದು,ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಗುಂಡೇಟಿನಿಂದ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿರುವ ಇತರ ಐವರನ್ನು ಕೂಚ್ಬೆಹಾರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
ಆರೋಪಗಳನ್ನು ನಿರಾಕರಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸುಕುಮಾರ್ ರಾಯ್ ಅವರು,ಟಿಎಂಸಿಯಲ್ಲಿನ ಆಂತರಿಕ ಕಲಹದಿಂದಾಗಿ ಈ ಸಾವುನೋವುಗಳು ಸಂಭವಿಸಿವೆ ಎಂದು ಆರೋಪಿಸಿದರು.
ಪಂಚಾಯತ್ ಚುನಾವಣೆಗಳಿಗಾಗಿ ಜೂ.9ರಂದು ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಾಗಿನಿಂದ ರಾಜ್ಯದಲ್ಲಿ ಹಿಂಸಾಚಾರದ ಹಲವಾರು ಘಟನೆಗಳು ವರದಿಯಾಗಿವೆ. ಕನಿಷ್ಠ ಎಂಟು ಜನರು ಹಿಂಸಾಚಾರಗಳಿಗೆ ಬಲಿಯಾಗಿದ್ದಾರೆ.