ಪಹಲ್ಗಾಮ್ ಭಯೋತ್ಪಾದಕ ದಾಳಿ: ಇದು ಭಯೋತ್ಪಾದನೆಯ ಅಂತ್ಯದ ಆರಂಭ ಎಂದ ಉಮರ್ ಅಬ್ದುಲ್ಲಾ

ಉಮರ್ ಅಬ್ದುಲ್ಲಾ | PTI
ಶ್ರೀನಗರ: “ಇದು ಭಯೋತ್ಪಾದನೆಯ ಅಂತ್ಯದ ಆರಂಭ” ಎಂದು ಎಪ್ರಿಲ್ 22ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಘೋಷಿಸಿದರು.
ಸೋಮವಾರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಉಮರ್ ಅಬ್ದುಲ್ಲಾ, “ಉತ್ತರದಿಂದ ದಕ್ಷಿಣ, ಪೂರ್ವದಿಂದ ಪಶ್ಚಿಮ ಸೇರಿದಂತೆ ದೇಶದ ಎಲ್ಲ ಭಾಗಗಳೂ ಈ ಘೋರ ಕೃತ್ಯದ ನೋವಿನಲ್ಲಿ ಭಾಗಿಯಾಗಿವೆ. ಈ ದಾಳಿಯ ವಿರುದ್ಧ ಇಡೀ ಕಾಶ್ಮೀರ ಒಗ್ಗಟ್ಟಾಗಿದ್ದು, ಇದು ಕಾಶ್ಮೀರ ಕಣಿವೆಯಲ್ಲಿನ ಭಯೋತ್ಪಾದನೆಯ ಅಂತ್ಯದ ಆರಂಭವಾಗಿದೆ” ಎಂದು ಹೇಳಿದರು.
ಈ ವೇಳೆ ಅಪರೂಪದ ಒಗ್ಗಟ್ಟು ಪ್ರದರ್ಶಿಸಿದ ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳ ಸದಸ್ಯರೆಲ್ಲರೂ, ಎಪ್ರಿಲ್ 22ರಂದು 25 ಮಂದಿ ಪ್ರವಾಸಿಗರು ಹಾಗೂ ಓರ್ವ ಕಾಶ್ಮೀರಿಯನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ಕುರಿತು ಉಮರ್ ಅಬ್ದುಲ್ಲಾ ನೀಡಿದ ಹೇಳಿಕೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ನಂತರ ಮಾತನಾಡಿದ ವಿರೋಧ ಪಕ್ಷಗಳ ನಾಯಕ ಸುನೀಲ್ ಶರ್ಮ, ಪಹಲ್ಗಾಮ್ ದಾಳಿಯನ್ನು ಖಂಡಿಸಿದರು. ಈ ಕುರಿತು ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆದು, ವಿಶೇಷ ಅಧಿವೇಶನ ಕರೆಯುವಂತೆ ವಿಧಾನಸಭಾ ಸ್ಪೀಕರ್ ಅಬ್ದುಲ್ ರಹೀಂ ರಾಥರ್ ಗೆ ಸೂಚಿಸಿರುವ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾರ ನಡೆಯನ್ನೂ ಅವರು ಪ್ರಶಂಸಿಸಿದರು.
ಈ ವೇಳೆ, ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹತರಾದ ಎಲ್ಲ 26 ಸಂತ್ರಸ್ತರ ಹೆಸರು ಹಾಗೂ ಅವರ ರಾಜ್ಯಗಳ ಹೆಸರುಗಳನ್ನು ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಸದನದಲ್ಲಿ ಓದಿ ಹೇಳಿದರು.