ಗುರುನಾನಕ್ ಜಯಂತಿ, ದೀಪಾವಳಿ ಪ್ರಯುಕ್ತ ಸಿಖ್ - ಹಿಂದೂ ಕುಟುಂಬಗಳಿಗೆ ಪಾಕಿಸ್ತಾನದಿಂದ ನಗದು ನೆರವು
PC : Meta AI
ಲಾಹೋರ್ : ಗುರುನಾನಕ್ ಜಯಂತಿ ಹಾಗೂ ದೀಪಾವಳಿ ಅಂಗವಾಗಿ ಪಾಕಿಸ್ತಾನದ ಪಂಜಾಬ್ ಸರಕಾರವು ತಲಾ 2,200 ಸಿಖ್ ಮತ್ತು ಹಿಂದೂ ಕುಟುಂಬಗಳಿಗೆ ತಲಾ 10,000 ಪಾಕಿಸ್ತಾನ ರೂಪಾಯಿ ನೆರವನ್ನು ವಿತರಿಸಲಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಾಸಿಸುತ್ತಿರುವ ತಲಾ 2,200 ಸಿಖ್ ಮತ್ತು ಹಿಂದೂ ಕುಟುಂಬಗಳಿಗೆ ಗುರುನಾನಕ್ ಜಯಂತಿ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಪಾಕಿಸ್ತಾನದ ಪಂಜಾಬ್ ಸರಕಾರವು ತಲಾ 10,000 ಪಾಕಿಸ್ತಾನ ರೂಪಾಯಿ (3,000 ರೂ.) ಮೌಲ್ಯದ ಹಬ್ಬದ ಉಡುಗೊರೆ ವಿತರಿಸಲಿದೆ.
ಮುಂದಿನ ತಿಂಗಳು ನಡೆಯಲಿರುವ ಗುರುನಾನಕ್ ಅವರ 555ನೇ ಜನ್ಮದಿನದ ಅಂಗವಾಗಿ ವಿದೇಶಿ ಯಾತ್ರಾರ್ಥಿಗಳು ಆಗಮಿಸುವ ನಿರೀಕ್ಷೆಯಿದ್ದು, ಅವರಿಗಾಗಿ ವಿಶೇಷ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ.
ಬುಧವಾರ ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಪಂಜಾಬ್ ಸರಕಾರದ ವಕ್ತಾರರು, “ನಮ್ಮ ಹಿಂದೂ ಮತ್ತು ಸಿಖ್ ಸಹೋದರರಿಗೆ ಹಬ್ಬದ ಉಡುಗೊರೆ ವಿತರಿಸುವ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಿ ಎಂದು ಸಂಬಂಧಿತ ಪ್ರಾಧಿಕಾರಗಳಿಗೆ ಮುಖ್ಯಮಂತ್ರಿ ಮರ್ಯಮ್ ನವಾಝ್ ಸೂಚಿಸಿದ್ದಾರೆ. ತಲಾ 2,200 ಸಿಖ್ ಮತ್ತು ಹಿಂದೂ ಕುಟುಂಬಗಳಿಗೆ ಹಬ್ಬದ ಉಡುಗೊರೆ ವಿತರಿಸಲು ಪಂಜಾಬ್ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಯೋಜನೆಯಡಿ ಸಿಖ್ ಮತ್ತು ಹಿಂದೂ ಕುಟುಂಬಗಳು ಕ್ರಮವಾಗಿ ತಮ್ಮ ಧಾರ್ಮಿಕ ಹಬ್ಬಗಳಾದ ಗುರುನಾನಕ್ ಜಯಂತಿ ಮತ್ತು ದೀಪಾವಳಿ ಹಬ್ಬವನ್ನು ಆಚರಿಸಲು 10,000 ಪಾಕಿಸ್ತಾನ ರೂಪಾಯಿ ನೆರವು ಸ್ವೀಕರಿಸಲಿವೆ” ಎಂದು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಈ ಯೋಜನೆಯು ಈ ವರ್ಷದಿಂದ ಪ್ರಾರಂಭಗೊಂಡಿದ್ದು, ಸಿಖ್ ಮತ್ತು ಹಿಂದೂ ಸಮುದಾಯದ ಈ ತಲಾ 2,200 ಕುಟುಂಬಗಳಿಗೆ ಪ್ರತಿ ವರ್ಷ ಹಬ್ಬದ ಉಡುಗೊರೆಯಡಿ ನಗದು ನೆರವನ್ನು ವಿತರಿಸಲಾಗುತ್ತದೆ.