ಪಾಕಿಸ್ತಾನ ಇತಿಹಾಸದಿಂದ ಇನ್ನೂ ಪಾಠ ಕಲಿತಿಲ್ಲ: ಕಾರ್ಗಿಲ್ನಲ್ಲಿ ಪ್ರಧಾನಿ ಮೋದಿ ಹೇಳಿಕೆ
ಪ್ರಧಾನಿ ನರೇಂದ್ರ ಮೋದಿ (Photo: ANI)
ಕಾರ್ಗಿಲ್: ಪಾಕಿಸ್ತಾನ ತನಗಾಗಿರುವ ನಷ್ಟದಿಂದ ಇದುವರೆಗೂ ಏನನ್ನೂ ಕಲಿತಿಲ್ಲ ಹಾಗೂ ಭಯೋತ್ಪಾದಕರ ತವರಾಗಿದೆ ಎಂದು 1999ರ ಕಾರ್ಗಿಲ್ ಯುದ್ಧದ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಾರ್ಗಿಲ್ ಯುದ್ಧ ಸ್ಮಾರಕದೆದುರು ಯೋಧರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಪಾಕಿಸ್ತಾನವು ದುಸ್ಸಾಹಸಕ್ಕೆ ಕೈಹಾಕಿದಾಗಲೆಲ್ಲ ಪರಾಭವ ಅನುಭವಿಸಿದೆ. ಅದು ಇತಿಹಾಸದಿಂದ ಇನ್ನೂ ಪಾಠ ಕಲಿತಿಲ್ಲ” ಎಂದು ಕುಟುಕಿದರು.
ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ, ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರು ದೇಶಕ್ಕಾಗಿ ಮಾಡಿದ ತ್ಯಾಗವು ಸ್ಮರಣೀಯವಾಗಿದ್ದು, ಆ ತ್ಯಾಗವನ್ನು ಕಾರ್ಗಿಲ್ ವಿಜಯ ದಿವಸವಾಗಿ ಎಂದಿಗೂ ಸ್ಮರಿಸಲಾಗುವುದು ಎಂದು ಹೇಳಿದರು.
ಜುಲೈ 26, 1999ರಂದು ‘ಆಪರೇಷನ್ ವಿಜಯ್’ ಯಶಸ್ವಿಯಾಗಿದೆ ಎಂದು ಭಾರತೀಯ ಸೇನೆಯು ಘೋಷಿಸಿತ್ತು. ಸುದೀರ್ಘ ಸುಮಾರು ಮೂರು ತಿಂಗಳ ಕಾಲ ನಡೆದಿದ್ದ ಯುದ್ಧದಲ್ಲಿ ಲಡಾಖ್ ನಲ್ಲಿರುವ ಹಿಮಚ್ಛಾದಿತ ಕಾರ್ಗಿಲ್ ಬೆಟ್ಟವನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿತ್ತು.
ಈ ದಿನವನ್ನು ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ ದಿನವನ್ನಾಗಿ ಆಚರಿಸಲು ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸುತ್ತಾ ಬರಲಾಗುತ್ತಿದೆ.