ಮೋದಿ ಮೂರನೇ ಬಾರಿ ಪ್ರಧಾನಿಯಾದರೆ ಆರು ತಿಂಗಳಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗಲಿದೆ: ಆದಿತ್ಯನಾಥ್
ಪಾಲ್ಘರ (ಮಹಾರಾಷ್ಟ್ರ),ಮೇ 19: ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ಆರು ತಿಂಗಳುಗಳೊಳಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ವು ಭಾರತದ ಭಾಗವಾಗಲಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ.
ಶನಿವಾರ ಇಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಅವರು, ಆಹಾರ ಮತ್ತು ಇತರ ಅಗತ್ಯ ಸಾಮಗ್ರಿಗಳ ಹೆಚ್ಚುತ್ತಿರುವ ಬೆಲೆಗಳ ವಿರುದ್ಧ ಪಿಒಕೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಉಲ್ಲೇಖಿಸಿ,ಪಾಕಿಸ್ತಾನಕ್ಕೆ ಆ ಪ್ರದೇಶವನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟವಾಗುತ್ತಿದೆ ಎಂದರು.
ಚುನಾವಣೆಗಳ ಬಳಿಕ ಮೋದಿ ಮೂರನೇ ಸಲ ಪ್ರಧಾನಿಯಾಗಲಿ...ಆರು ತಿಂಗಳಲ್ಲಿ ಪಿಒಕೆ ಭಾರತದ ಭಾಗವಾಗುವುದನ್ನು ನೀವು ನೋಡುತ್ತೀರಿ. ಅದಕ್ಕೆ ಧೈರ್ಯ ಬೇಕು, ಆಗ ಮಾತ್ರ ಇಂತಹ ಕೆಲಸಗಳನ್ನು ಮಾಡಬಹುದು ಎಂದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಾರತೀಯ ನೆಲದಲ್ಲಿ ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದರೂ ಅದು ಪಾಕಿಸ್ತಾನದ ವಿರುದ್ಧ ಕಾರ್ಯಾಚರಿಸಿರಲಿಲ್ಲ ಎಂದು ಆರೋಪಿಸಿದ ಆದಿತ್ಯನಾಥ,‘ಇಂದು ಅವರು(ಪಾಕಿಸ್ತಾನ) ಭಾರತದತ್ತ ಕೆಟ್ಟ ಉದ್ದೇಶದಿಂದ ನೋಡುವ ಮೊದಲೇ ನಾವು ಅವರ ಕಣ್ಣುಗಳನ್ನು ಕಿತ್ತು ತೆಗೆಯುತ್ತೇವೆ ’ಎಂದರು.
ಕಳೆದ ಮೂರು ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಹಲವಾರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ ಮತ್ತು ಇದರ ಹಿಂದೆ ಭಾರತೀಯ ಏಜೆನ್ಸಿಗಳಿವೆ ಎಂದು ಪ್ರಮುಖ ಬ್ರಿಟಿಷ್ ದೈನಿಕ (ದಿ ಗಾರ್ಡಿಯನ್) ವರದಿ ಮಾಡಿತ್ತು ಎಂದೂ ಆದಿತ್ಯನಾಥ ಬೆಟ್ಟು ಮಾಡಿದರು. ವರದಿಗೆ ಪ್ರತಿಕ್ರಿಯಿಸಿದ ಅವರು,‘ಭಾರತ ಸರಕಾರವು ನಮ್ಮ ಶತ್ರುಗಳನ್ನು ಪೂಜಿಸುವುದಿಲ್ಲ. ಯಾರಾದರೂ ನಮ್ಮ ಜನರನ್ನು ಕೊಂದರೆ ಅವರೊಂದಿಗೆ ಹೇಗೆ ವ್ಯವಹರಿಸಬೇಕೋ ಹಾಗೆಯೇ ವ್ಯವಹರಿಸುತ್ತಿದ್ದೇವೆ ಮತ್ತು ಇದೇ ಈಗ ನಡೆಯುತ್ತಿದೆ ’ ಎಂದು ಹೇಳಿದರು.
ಆದಿತ್ಯನಾಥ್ ಹೇಳಿಕೆಗಳಿಗೆ ರವಿವಾರ ಪ್ರತಿಕ್ರಿಯಿಸಿದ ಶಿವಸೇನೆ (ಯುಬಿಟಿ) ನಾಯಕ ಸಂಜಯ ರಾವುತ್ ಅವರು, ಕಳೆದ ಹತ್ತು ವರ್ಷಗಳಲ್ಲಿ ಪಿಒಕೆಯನ್ನು ಭಾರತದ ಭಾಗವಾಗಿಸಲು ಕೇಂದ್ರ ಸರಕಾರವನ್ನು ಯಾವುದು ತಡೆದಿತ್ತು? ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಈಗ ಆದಿತ್ಯನಾಥ ಪಿಒಕೆಯನ್ನು ಭಾರತದಲ್ಲಿ ಸೇರಿಸುವುದಾಗಿ ಹೇಳಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಆ ಕೆಲಸವನ್ನು ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.