ಎಲ್ಒಸಿಯಲ್ಲಿ ಪಾಕ್ ಸೇನೆಯಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಭಾರತದ ಸೇನಾ ಪಡೆಯಿಂದ ತಕ್ಕ ಪ್ರತ್ಯುತ್ತರ
Photo : PTI
ಶ್ರೀನಗರ: ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆಯಾದ್ಯಂತ ಭಾರತೀಯ ನೆಲೆಗಳ ಮೇಲೆ ಶನಿವಾರ ರಾತ್ರಿ ಮತ್ತೆ ಲಘು ಶಸ್ತ್ರಾಸ್ತ್ರಗಳಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆ ಸೂಕ್ತ ಪ್ರತ್ಯುತ್ತರ ನೀಡಿದೆ.
ಜಮ್ಮು ಹಾಗೂ ಕಾಶ್ಮೀರದ ಪಹಲ್ಗಾಮ್ ನಲ್ಲಿ ಭೀಕರ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆಯಾದ್ಯಂತ ಸತತ ಮೂರನೇ ದಿನ ರಾತ್ರಿ ಕೂಡ ಕದನ ವಿರಾಮ ಉಲ್ಲಂಘಿಸಿದೆ.
ಪಾಕಿಸ್ತಾನ ಸೇನಾ ಠಾಣೆಗಳು ಎಪ್ರಿಲ್ 26ರಂದು ತಡ ರಾತ್ರಿ ಟೂಟ್ಮಾರಿ ಗಾಲಿ ಹಾಗೂ ರಾಮ್ಪುರ ವಲಯಗಳ ಎದುರಿನ ಪ್ರದೇಶದಲ್ಲಿರುವ ಗಡಿ ನಿಯಂತ್ರಣ ರೇಖೆಯಾದ್ಯಂತ ಲಘು ಶಸ್ತ್ರಾಸ್ತ್ರಗಳಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ನಮ್ಮ ಸೇನಾ ಪಡೆ ಸೂಕ್ತ ಶಸ್ತ್ರಾಸ್ತ್ರಗಳಿಂದ ಪರಿಣಾಮಕಾರಿ ಪತ್ಯುತ್ತರ ನೀಡಿತು ಎಂದು ಭಾರತೀಯ ಸೇನೆಯನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.
ಎಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದ ಸನ್ನದ್ಧತೆ ಪರಿಶೀಲಿಸುವ ಪಾಕಿಸ್ತಾನ ಸೇನೆಯ ಪ್ರಯತ್ನ ಇದಾಗಿರಬಹುದು ಎಂದು ಸೇನೆಯ ಮೂಲಗಳು ತಿಳಿಸಿವೆ. ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ಪರಸ್ಪರ ಸರಣಿ ರಾಜತಾಂತ್ರಿಕ ಕ್ರಮಗಳನ್ನು ಘೋಷಿಸುತ್ತಿರುವುದರಿಂದ ಈ ಬೆಳವಣಿಗೆ ನಡೆದಿದೆ.