ಬಿಜೆಪಿ ಟಿಕೆಟ್ ನಲ್ಲಿ ಗೋವಾದಿಂದ ಸ್ಪರ್ಧಿಸುತ್ತಿರುವ ಪ್ರಥಮ ಮಹಿಳಾ ಅಭ್ಯರ್ಥಿ
ಪಣಜಿ: ಪುಟ್ಟ ರಾಜ್ಯ ಗೋವಾದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಬಿಜೆಪಿ ಟಿಕೆಟ್ ನಲ್ಲಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಡೆಂಪೊ ಇಂಡಸ್ಟ್ರಿಸ್ ನ ಕಾರ್ಯನಿರ್ವಾಹಕ ನಿರ್ದೇಶಕಿ ಪಲ್ಲವಿ ಡೆಂಪೊ, ಇಡೀ ರಾಜ್ಯದ ಚುನಾವಣಾ ಇತಿಹಾಸದಲ್ಲೇ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಮೊದಲ ಮಹಿಳೆ. ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಶನಿವಾರ ಪ್ರಕಟಿಸಿದ 111 ಅಭ್ಯರ್ಥಿಗಳ ಪೈಕಿ ಪಲ್ಲವಿ ಹೆಸರೂ ಇದೆ.
ಗೋವಾದ ಉದ್ಯಮಿ ಹಾಗೂ ಶಿಕ್ಷಣ ತಜ್ಞೆಯಾಗಿರುವ ಪಲ್ಲವಿ ಡೆಂಪೊ, ರಸಾಯನಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅಂತೆಯೇ ಪುಣೆ ಎಂಐಟಿಯಿಂದ ಎಂಬಿಎ ಪದವಿಯನ್ನೂ ಹೊಂದಿದ್ದಾರೆ.
ಡೆಂಪೊ ಇಂಡಸ್ಟ್ರೀಸ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಂಪನಿಯ ಮಾಧ್ಯಮ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರವನ್ನು ಇವರು ನೋಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ದಕ್ಷಿಣ ಗೋವಾ ಕ್ಷೇತ್ರವನ್ನು ಕಾಂಗ್ರೆಸ್ ನ ಫ್ರಾನ್ಸಿಕೊ ಸರ್ದಿನಾ ಪ್ರತಿನಿಧಿಸುತ್ತಿದ್ದು, 1962ರಿಂದ ಇದುವರೆಗೆ ಬಿಜೆಪಿ ಎರಡು ಬಾರಿ ಮಾತ್ರ ಇಲ್ಲಿ ಗೆಲುವು ಸಾಧಿಸಿದೆ.
20 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಈ ಕ್ಷೇತ್ರ, ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ, ಯುನೈಟೆಡ್ ಗೋವನ್ ಪಾರ್ಟಿ ಹಾಗೂ ಭಾರತದ ರಾಷ್ಟ್ರೀಯ ಕಾಂಗ್ರೆಸ್ ನಡುವೆ ಬದಲಾಗುತ್ತಿದೆ. 1999 ಮತ್ತು 2014ರಲ್ಲಿ ಬಿಜೆಪಿ ಎರಡು ಬಾರಿ ಗೆದ್ದಿದ್ದರೂ ಅದನ್ನು ಮುಂದಿನ ಚುನಾವಣೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಪಲ್ಲವಿಯವರ ಪತಿ ಶ್ರೀನಿವಾಸ ಡೆಂಪೊ ಪ್ರಖ್ಯಾತ ಉದ್ಯಮಿಯಾಗಿದ್ದು, ಗೋವಾ ಚೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷರೂ ಆಗಿದ್ದಾರೆ.