ಯುಪಿಐ ಮೂಲಕ ಹಣ ಸ್ವೀಕರಿಸಿ ಜಿಎಸ್ಟಿ ಬಲೆಗೆ ಬಿದ್ದ ತಮಿಳುನಾಡಿನ ಪಾನಿಪುರಿ ಮಾರಾಟಗಾರ!
PC : X \ @DrJagdishChatur
ಚೆನ್ನೈ : ತಮಿಳುನಾಡಿನ ಪಾನಿಪುರಿ ಮಾರಾಟಗಾರನೋರ್ವನಿಗೆ ಕಳುಹಿಸಲಾಗಿರುವ ಜಿಎಸ್ಟಿ ನೋಟಿಸ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು,ಹಲವರು ಇದೊಳ್ಳೆ ತಮಾಷೆ ವಿಷಯ ಎಂದು ಭಾವಿಸಿದ್ದರೆ ಇನ್ನು ಕೆಲವರು ತಮ್ಮ ಉದ್ಯೋಗವನ್ನೇ ಬದಲಿಸಿ ಪಾನಿಪುರಿ ಮಾರುವ ಚಿಂತನೆಯಲ್ಲಿದ್ದಾರೆ.
2023-24ರಲ್ಲಿ ಪಾನಿಪುರಿ ಮಾರಾಟಗಾರ ಸ್ವೀಕರಿಸಿದ್ದ 40 ಲಕ್ಷ ರೂ.ಗಳ ಹಣಪಾವತಿಗೆ ಸಂಬಂಧಿಸಿದ ನೋಟಿಸ್ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಗಳನ್ನು ಹುಟ್ಟು ಹಾಕಿದೆ.
ತಮಿಳುನಾಡು ಸರಕುಗಳು ಮತ್ತು ಸೇವಾ ತೆರಿಗೆ ಕಾಯ್ದೆಯ ಕಲಂ 70 ಮತ್ತು ಕೇಂದ್ರ ಜಿಎಸ್ಟಿ ಕಾಯ್ದೆಯಡಿ ಡಿ.17ರಂದು ಹೊರಡಿಸಿರುವ ನೋಟಿಸ್ನಲ್ಲಿ, ಖುದ್ದಾಗಿ ಹಾಜರಾಗುವಂತೆ ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಪಾನಿಪುರಿ ಮಾರಾಟಗಾರನಿಗೆ ಸೂಚಿಸಲಾಗಿದೆ.
Pani puri wala makes 40L per year and gets an income tax notice pic.twitter.com/yotdWohZG6
— Jagdish Chaturvedi (@DrJagdishChatur) January 2, 2025
ರೇಜರ್ ಪೇ ಮತ್ತು ಫೋನ್ ಪೇ ಸಲ್ಲಿಸಿರುವ ವರದಿಗಳ ಆಧಾರದಲ್ಲಿ ನೀವು 2023-24ನೇ ಸಾಲಿನಲ್ಲಿ ಸರಕುಗಳು/ಸೇವೆಗಳ ಪೂರೈಕೆಗಾಗಿ 40 ಲಕ್ಷ ರೂ.ಗಳ ಯುಪಿಐ ಪಾವತಿಗಳನ್ನು ಸ್ವೀಕರಿಸಿದ್ದೀರಿ. ಜಿಎಸ್ಟಿ ನೋಂದಣಿಯಿಲ್ಲದೆ ಕಾಯ್ದೆಯಡಿ ನಮೂದಿಸಲಾದ ಮಿತಿಗಿಂತ ಹೆಚ್ಚಿನ ವಹಿವಾಟನ್ನು ನಡೆಸುವುದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಪಾನಿಪುರಿ ಮಾರಾಟಗಾರ 2021-22 ಮತ್ತು 2022-23ರಲ್ಲಿ ಯುಪಿಐ ಮೂಲಕ ಸ್ವೀಕರಿಸಿದ್ದ ಹಣಪಾವತಿ ಮೊತ್ತಗಳನ್ನೂ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಆದಾಗ್ಯೂ, ವೈರಲ್ ನೋಟಿಸ್ನ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ಪರಿಶೀಲಿಸಲು ಸುದ್ದಿಸಂಸ್ಥೆಗೆ ಸಾಧ್ಯವಾಗಿಲ್ಲ.
ವೈರಲ್ ನೋಟಿಸ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
40 ಲಕ್ಷ ರೂ.ಪಾನಿಪುರಿ ಮಾರಾಟಗಾರ ಸ್ವೀಕರಿಸಿದ್ದ ಹಣವಾಗಿದ್ದು, ಅದು ಆತನ ಆದಾಯ ಆಗಿರಬಹುದು ಅಥವಾ ಆಗಿರದಿರಬಹುದು. ನೀವು ಇದರಲ್ಲಿ ಪಾನಿಪುರಿ ತಯಾರಿಕೆಗೆ ತಗಲಿದ ವೆಚ್ಚ, ಮಾನವ ಶಕ್ತಿ ವೆಚ್ಚಗಳು, ಸ್ಥಿರ ಖರ್ಚುಗಳು ಇತ್ಯಾದಿಗಳನ್ನು ಕಳೆಯಬೇಕು. ಆತ ಜೀವನ ನಿರ್ವಹಣೆಗೆ ಅಗತ್ಯ ಲಾಭವನ್ನಷ್ಟೇ ಪಡೆಯುತ್ತಿರಬಹುದು ಎಂದು ಓರ್ವ ಎಕ್ಸ್ ಬಳಕೆದಾರ ಹೇಳಿದ್ದಾರೆ.
ನೋಟಿಸ್ನಲ್ಲಿ ಉಲ್ಲೇಖಿಸಲಾಗಿರುವ ಮೊತ್ತವು ಆದಾಯಕ್ಕನುಗುಣವಾಗಿ ತೆರಿಗೆಗಳನ್ನು ಪಾವತಿಸುತ್ತಿರುವ ಮೆಡಿಕಲ್ ಕಾಲೇಜುಗಳಲ್ಲಿಯ ಹಲವಾರು ಪ್ರಾಧ್ಯಾಪಕರ ವೇತನಕ್ಕಿಂತ ಅಧಿಕವಾಗಿದೆ ಎಂದು ಎಕ್ಸ್ ಪೋಸ್ಟ್ನಲ್ಲಿ ಬೆಟ್ಟು ಮಾಡಿರುವ ಮನಃಶಾಸ್ತ್ರ ಪ್ರಾಧ್ಯಾಪಕ ಡಾ.ಧೀರಜ್ ಕೆ. ಅವರು,ಪಾನಿಪುರಿ ಮಾರಾಟಗಾರ ತನ್ನ ಬಿಲ್ ಗೆ ಜಿಎಸ್ಟಿ ಸೇರಿಸಿ ಅದನ್ನು ಸರಕಾರಕ್ಕೆ ಪಾವತಿಸಬಹುದು. ಆದರೆ ಇತರರ ದರ ಕಡಿಮೆಯಿರುವಾಗ ಆತ ತನ್ನ ವ್ಯಾಪಾರವನ್ನು ಕಳೆದುಕೊಳ್ಳಬೇಕಾಗುತ್ತದೆ. ತೆರಿಗೆ ಅಧಿಕಾರಿಗಳ ಕ್ರಮವು ಜನರನ್ನು ನಗದು ವಹಿವಾಟುಗಳಿಗೆ ತಳ್ಳುತ್ತದೆ ಎಂದು ಹೇಳಿದ್ದಾರೆ.