ಗೋವಾದ್ಯಂತ ಪ್ಯಾರಾಗ್ಲೈಡಿಂಗ್ ಚಟುವಟಿಕೆ ಅಮಾನತು

ಸಾಂದರ್ಭಿಕ ಚಿತ್ರ (PTI)
ಪಣಜಿ: ತಕ್ಷಣದಿಂದಲೇ ಜಾರಿಗೆ ಬರುವಂತೆ ಗೋವಾದ್ಯಂತ ಮೋಟಾರ್ ಚಾಲಿತ ಹಾಗೂ ಮೋಟಾರ್ ರಹಿತ ಪ್ಯಾರಾಗ್ಲೈಡಿಂಗ್ ಚಟುವಟಿಕೆಗಳನ್ನು ಗೋವಾ ಪ್ರವಾಸೋದ್ಯಮ ಇಲಾಖೆ ಅಮಾನತುಗೊಳಿಸಿದೆ. ಕೆಲ ದಿನಗಳ ಹಿಂದೆ ಪುಣೆಯ ಮಹಿಳೆ ಹಾಗೂ ಪ್ಯಾರಾಗ್ಲೈಡಿಂಗ್ ನಿರ್ವಾಹಕರೊಬ್ಬರು ಉತ್ತರ ಗೋವಾದ ಕೇರಿಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪ್ಯಾರಾಗ್ಲೈಡಿಂಗ್ ನಿರ್ವಾಹಕರು ಸುರಕ್ಷತಾ ಮಾನದಂಡಗಳನ್ನು ಪಾಲಿಸುತ್ತಿದ್ದಾರೆಯೆ ಎಂಬುದನ್ನು ಪರಿಶೀಲಿಸುವಂತೆ ಎಲ್ಲ ಪ್ಯಾರಾಗ್ಲೈಡಿಂಗ್ ಚಟುವಟಿಕೆಗಳ ಪರಾಮರ್ಶೆಗೆ ಆದೇಶಿಸಿರುವ ಪ್ರವಾಸೋದ್ಯಮ ನಿರ್ದೇಶಕ ಕೇದಾರ್ ನಾಯಕ್ ಸೂಚಿಸಿದ್ದಾರೆ.
“ಈ ಆದೇಶವನ್ನು ಜಾರಿಗೊಳಿಸಲು ಸಂಬಂಧಿತ ವ್ಯಾಪ್ತಿಯ ಪೊಲೀಸ್ ಠಾಣೆಗಳ ಎಲ್ಲ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಠಾಣೆಗಳ ಉಸ್ತುವಾರಿಗಳು ನೆರವು ನೀಡಬೇಕು ಎಂದು ಸೂಚಿಸಲಾಗಿದೆ. ಈ ಆದೇಶದ ವ್ಯಾಪ್ತಿಗೆ ಬರುವ ಯಾವುದೇ ವ್ಯಕ್ತಿ, ಕಂಪನಿ, ಸಂಘಟನೆ, ಸಂಸ್ಥೆ ಅಥವಾ ಇನ್ಯಾವುದೇ ಸಂಸ್ಥೆ ಅಥವಾ ಈ ಆದೇಶಕ್ಕೆ ಅಡಚಣೆಯನ್ನುಂಟು ಮಾಡುವ ಯಾವುದೇ ವ್ಯಕ್ತಿಗೆ 50,000 ರೂ. ದಂಡ ಹಾಗೂ ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 223ರ ಅನ್ವಯ ಶಿಕ್ಷೆ ವಿಧಿಸಬಹುದಾಗಿದೆ” ಎಂದು ತಮ್ಮ ಆದೇಶದಲ್ಲಿ ನಾಯಕ್ ಹೇಳಿದ್ದಾರೆ.