ಶಾಲೆಗಳಲ್ಲಿನ ಹವಾನಿಯಂತ್ರಣ ವೆಚ್ಚವನ್ನು ಪೋಷಕರೇ ಭರಿಸಬೇಕು: ದಿಲ್ಲಿ ಹೈಕೋರ್ಟ್

ಸಾಂದರ್ಭಿಕ ಚಿತ್ರ | PC : NDTV
ಹೊಸದಿಲ್ಲಿ: ತರಗತಿ ಕೊಠಡಿಗಳಲ್ಲಿ ಅಳವಡಿಸಲಾಗಿರುವ ಹವಾನಿಯಂತ್ರಣ ವ್ಯವಸ್ಥೆಗೆ ಶುಲ್ಕ ವಿಧಿಸುವ ಖಾಸಗಿ ಶಾಲೆಗಳ ಅಧಿಕಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ವಜಾಗೊಳಿಸಿದೆ. “ಶಾಲಾ ವಿದ್ಯಾರ್ಥಿಗಳಿಗೆ ಒದಗಿಸಲಾಗುವ ಹವಾನಿಯಂತ್ರಣ ಸೇವೆಗಳ ವೆಚ್ಚವನ್ನು ಪೋಷಕರೇ ಭರಿಸಬೇಕು” ಎಂದು ಮೇ 2ರ ತನ್ನ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.
ಮಹಾರಾಜ ಅಗ್ರಸೈನ್ ಪಬ್ಲಿಕ್ ಶಾಲೆಯು ಹವಾನಿಯಂತ್ರಣ ಸೇವಾ ಶುಲ್ಕವಾಗಿ ಮಾಸಿಕ ರೂ. 2000 ವಿಧಿಸುತ್ತಿರುವುದು ಅಕಾರಣವಾಗಿದೆ ಎಂದು ವಾದಿಸಿದ್ದ ಅರ್ಜಿದಾರ ಮನೀಶ್ ಗೋಯಲ್, ಈ ವಿಚಾರದಲ್ಲಿ ಶಿಕ್ಷಣ ನಿರ್ದೇಶನಾಲಯವು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದ್ದರು.
ತರಗತಿಯ ಕೊಠಡಿಗಳಲ್ಲಿ ಹವಾನಿಯಂತ್ರಣ ವ್ಯವಸ್ಥೆಯನ್ನು ಒದಗಿಸುವುದು ಶಾಲಾ ಆಡಳಿತ ಮಂಡಳಿಯ ಬಾಧ್ಯತೆಯಾಗಿದ್ದು, ಅದಕ್ಕಾಗಿ ಶಾಲೆಯ ಸ್ವಂತ ನಿಧಿ ಹಾಗೂ ಸಂಪನ್ಮೂಲಗಳಿಂದ ಹಣ ಒದಗಿಸಬೇಕು ಎಂದು ಅವರು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.
ಹವಾನಿಯಂತ್ರಣ ಸೇವಾ ಶುಲ್ಕವು ದಿಲ್ಲಿ ಶಾಲಾ ಶಿಕ್ಷಣ ನಿಯಮಗಳು, 1973ರ ನಿಯಮ 154ಕ್ಕೆ ವ್ಯತಿರಿಕ್ತವಾಗಿದ್ದು, ಈ ವೆಚ್ಚವನ್ನು ಅರ್ಜಿದಾರರು ಪಾವತಿಸಲು ಬಾಧ್ಯಸ್ಥರಾಗಿರಬಾರದು ಎಂದೂ ಅರ್ಜಿಯಲ್ಲಿ ವಾದಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಹಾಗೂ ನ್ಯಾ. ಮನಮೀತ್ ಪಿ.ಎಸ್. ಅರೋರಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ವಾದಕ್ಕೆ ಅಸಮ್ಮತಿ ಸೂಚಿಸಿತು. ಶಾಲೆಗಳು ವಿಧಿಸುವ ಇನ್ನಿತರ ಶುಲ್ಕಗಳೊಂದಿಗೆ ಹವಾನಿಯಂತ್ರಣ ಸೇವಾ ಶುಲ್ಕವನ್ನು ಹೋಲಿಸಿದ ನ್ಯಾಯಾಲಯವು, “ಶಾಲೆಗಳು ಪ್ರಯೋಗಾಲಯ ಹಾಗೂ ಸ್ಮಾರ್ಟ್ ತರಗತಿಗಳಂತಹ ಇನ್ನಿತರ ಸೇವೆಗಳಿಗೆ ವಿಧಿಸುವ ಶುಲ್ಕಗಳಿಗಿಂತ ಹವಾನಿಯಂತ್ರಣ ಸೇವಾ ಸೌಲಭ್ಯ ಶುಲ್ಕವು ಭಿನ್ನವಾಗಿಲ್ಲ” ಎಂದು ಅಭಿಪ್ರಾಯ ಪಟ್ಟಿತು.
“ಇಂತಹ ಸೌಲಭ್ಯಗಳನ್ನು ಒದಗಿಸಲು ಆಗುವ ಆರ್ಥಿಕ ಹೊರೆಯನ್ನು ಕೇವಲ ಶಾಲಾ ಆಡಳಿತ ಮಂಡಳಿಗಳ ಮೇಲೆಯೇ ಹೇರಲು ಸಾಧ್ಯವಿಲ್ಲ. ಪೋಷಕರು ಶಾಲೆಯನ್ನು ಆಯ್ಕೆ ಮಾಡುವಾಗ ತಮ್ಮ ಮಕ್ಕಳಿಗೆ ಒದಗಿಸುವ ಸೌಲಭ್ಯಗಳು ಹಾಗೂ ಆ ಸೌಲಭ್ಯಗಳಿಗೆ ಆಗುವ ವೆಚ್ಚದ ಬಗ್ಗೆ ತಿಳಿವಳಿಕೆ ಹೊಂದಿರಬೇಕು” ಎಂದೂ ನ್ಯಾಯಾಧೀಶರು ಹೇಳಿದ್ದಾರೆ.
ಈ ನಡುವೆ, ಈ ವಿಚಾರವನ್ನು ದಿಲ್ಲಿ ಸರಕಾರವು ಪರಿಶೀಲಿಸುತ್ತಿದೆ ಎಂದು ಹೇಳಿರುವ ಶಿಕ್ಷಣ ನಿರ್ದೇಶನಾಲಯವು, ದೂರುಗಳ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ವರದಿಯನ್ನು ಕೋರಲಾಗಿದೆ ಎಂದು ತಿಳಿಸಿದೆ.