ಸರಳೀಕೃತ ಹೊಸ ಆದಾಯ ತೆರಿಗೆ ಮಸೂದೆ | ನಾಳೆ ಸಂಸತ್ತಿನಲ್ಲಿ ಮಂಡನೆ ಸಾಧ್ಯತೆ

ಲೋಕಸಭೆ | PC : PTI
ಹೊಸದಿಲ್ಲಿ: ಗುರುವಾರ ಲೋಕಸಭೆಯಲ್ಲಿ ಮಂಡನೆಯಾಗುವ ಸಾಧ್ಯತೆಯಿರುವ ಸರಳೀಕೃತ ಹೊಸ ಆದಾಯ ತೆರಿಗೆ ಮಸೂದೆಯು 622 ಪುಟಗಳಷ್ಟಿದ್ದು, 536 ವಿಭಾಗಗಳು ಮತ್ತು 23 ಅಧ್ಯಾಯಗಳನ್ನು ಒಳಗೊಂಡಿದೆ.
ನೂತನ ಮಸೂದೆಯು ಶಾಸನವಾದ ಬಳಿಕ ವರ್ಷಗಳ ಕಾಲ ತಿದ್ದುಪಡಿಗಳಿಂದಾಗಿ ಗಾತ್ರವನ್ನು ಹೆಚ್ಚಿಸಿಕೊಂಡು ಸಂಕೀರ್ಣಗೊಂಡಿರುವ ಆದಾಯ ತೆರಿಗೆ ಕಾಯ್ದೆ,1961 ಸ್ಥಾನದಲ್ಲಿ ಬರಲಿದೆ.
ಪ್ರಸ್ತಾವಿತ ಕಾನೂನು ಆದಾಯ ತೆರಿಗೆ ಕಾಯ್ದೆ,1961ರಲ್ಲಿಯ ‘ಹಿಂದಿನ ವರ್ಷ’ ಪದವನ್ನು ‘ತೆರಿಗೆ ವರ್ಷ’ ಎಂದು ಬದಲಿಸಲಿದೆ. ಅಲ್ಲದೆ ಮೌಲ್ಯಮಾಪನ ವರ್ಷದ ಪರಿಕಲ್ಪನೆಯನ್ನೂ ಕೈಬಿಡಲಾಗಿದೆ.
ಪ್ರಸ್ತುತ ಹಿಂದಿನ ವರ್ಷ(ಉದಾ:2023-24)ದ ಆದಾಯದ ಮೇಲಿನ ತೆರಿಗೆಯನ್ನು ಮೌಲ್ಯಮಾಪನ ವರ್ಷ(ಉದಾ:2024-25)ದಲ್ಲಿ ಪಾವತಿಸಲಾಗುತ್ತದೆ. ಸರಳೀಕೃತ ಮಸೂದೆಯಲ್ಲಿ ಹಿಂದಿನ ವರ್ಷ ಮತ್ತು ಮೌಲ್ಯಮಾಪನ ವರ್ಷಗಳನ್ನು ಕೈಬಿಡಲಾಗಿದ್ದು,ಕೇವಲ ತೆರಿಗೆ ವರ್ಷವನ್ನು ಒಳಗೊಂಡಿದೆ.
ಅಸ್ತಿತ್ವದಲ್ಲಿರುವ 1961ರ ಆದಾಯ ತೆರಿಗೆ ಕಾಯ್ದೆಯು 298 ವಿಭಾಗಗಳನ್ನು ಹೊಂದಿದ್ದರೆ ನೂತನ ಆದಾಯ ತೆರಿಗೆ ಮಸೂದೆಯು 536 ವಿಭಾಗಗಳನ್ನು ಒಳಗೊಂಡಿದೆ. ಹಾಲಿ ಕಾಯ್ದೆಯಲ್ಲಿ 14 ಅನುಸೂಚಿಗಳಿದ್ದು,ನೂತನ ಶಾಸನದಲ್ಲಿ ಇದು 16ಕ್ಕೆ ಏರಿಕೆಯಾಗಿದೆ.