ವಕ್ಫ್ ಗದ್ದಲದ ನಡುವೆ ಮೊದಲ ಹಂತದ ಬಜೆಟ್ ಅಧಿವೇಶನ ಮುಕ್ತಾಯ
ಮಾ.10ರವರೆಗೆ ಮುಂದೂಡಿಕೆ

Photo - PTI
ಹೊಸದಿಲ್ಲಿ: ಲೋಕಸಭೆಯ ಕಲಾಪಗಳನ್ನು ಮಾರ್ಚ್ 10ರವರೆಗೆ ಗುರುವಾರ ಮುಂದೂಡಲಾಗಿದೆ. ಇದರೊಂದಿಗೆ ಬಜೆಟ್ ಅಧಿವೇಶನದ ಮೊದಲ ಹಂತವು ಮುಕ್ತಾಯಗೊಂಡಿದೆ.
ವಕ್ಫ್ (ತಿದ್ದುಪಡಿ) ವಿಧೇಯಕದ ಕುರಿತ ವರದಿಯನ್ನು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯು ಇಂದು ಮಂಡಿಸಿದ ಬಳಿಕ ಸಂಸತ್ನ ಉಭಯ ಸದನಗಳು ಭಾರೀ ಕೋಲಾಹಲಕ್ಕೆ ಸಾಕ್ಷಿಯಾದವು. ವಕ್ಫ್ ತಿದ್ದುಪಡಿ ವಿಧೇಯಕದ ಕುರಿತಾದ ತಮ್ಮ ಭಿನ್ನಾಭಿಪ್ರಾಯಗಳ ಟಿಪ್ಪಣಿಗಳನ್ನು ಸರಕಾರವು ವರದಿಯಿಂದ ತೆಗೆದುಹಾಕಿದೆಯೆಂದು ಆರೋಪಿಸಿ ಪ್ರತಿಪಕ್ಷ ಸದಸ್ಯರು ಸದನದಲ್ಲಿ ಗದ್ದಲವೆಬ್ಬಿಸಿದರು.
ಇಂದು ಬೆಳಗ್ಗೆ ರಾಜ್ಯಸಭೆಯಲ್ಲೂ ಜೆಪಿಸಿ ವರದಿಯನ್ನು ಮಂಡಿಸಲಾಗಿದ್ದು, ಕೋಲಾಹಲಕ್ಕೆ ಕಾರಣವಾಯಿತು. ವಕ್ಫ್ ತಿದ್ದುಪಡಿ ವಿಧೇಯಕವು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ವಿಪಕ್ಷಗಳ ಭಿನ್ನಮತವನ್ನು ತಿರಸ್ಕರಿಸಿ ವರದಿಯನ್ನು ಮಂಡಿಸಲಾಗಿದೆಯೆಂದು ಲೋಕಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಇತ್ತ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ವಿಧೇಯಕದ ಜೆಪಿಸಿ ವರದಿಯನ್ನು ಸಮಿತಿಯ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಜಗದಂಬಿಕಾ ಪಾಲ್ ಅವರು ಮಂಡಿಸುತ್ತಿದ್ದಂತೆಯೇ, ಪ್ರತಿಪಕ್ಷ ಸದಸ್ಯರು ಸ್ಪೀಕರ್ ಸದನದ ಅಂಗಣಕ್ಕೆ ಧಾವಿಸಿ ಬಂದು ಘೋಷಣೆಗಳನ್ನು ಕೂಗಿದರು.
ಆಗ ವಿಪಕ್ಷ ಸದಸ್ಯರ ಆರೋಪಗಳಿಗೆ ಉತ್ತರಿಸಲು ಮುಂದಾದ ಅಮಿತ್ ಶಾ ಅವರು, ಭಿನ್ನಾಭಿಪ್ರಾಯದ ಟಿಪ್ಪಣಿಯನ್ನು ಸೇರ್ಪಡೆಗೊಳಿಸುವುದಕ್ಕೆ ಸರಕಾರದ ಯಾವುದೇ ಆಕ್ಷೇಪವಿಲ್ಲವೆಂದು ತಿಳಿಸಿದರು.
‘‘ ಕೆಲವು ಪ್ರತಿಪಕ್ಷ ಸದಸ್ಯರು ಜೆಪಿಸಿ ವರದಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಪೂರ್ತಿಯಾಗಿ ಸೇರ್ಪಡೆಗೊಳಿಸಿಲ್ಲವೆಂದು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷದ ಕಳವಳವನ್ನು ಪರಿಗಣನೆಗೆ ತೆಗೆದುಕೊಂಡು ಯಾವುದೇ ವಿಷಯವನ್ನು ಕೂಡಾ ಸೇರ್ಪಡೆಗೊಳಿಸಬಹುದಾಗಿದೆ. ನನ್ನ ಪಕ್ಷಕ್ಕೆ ಯಾವುದೇ ಅಭ್ಯಂತರವಿಲ್ಲ ’’ ಎಂದು ಹೇಳಿದರು
ಕೇಂದ್ರ ಸರಕಾರವು ಪಾಕಿಸ್ತಾನದ ಗಡಿಯುದ್ದಕ್ಕೂ ಜಾರಿಯಲ್ಲಿರುವ ರಾಷ್ಟ್ರೀಯ ಭದ್ರತಾ ನಿಯಮಗಳನ್ನು ಉಲ್ಲಂಘಿಸಿ, ಆದಾನಿ ಉದ್ಯಮ ಸಮೂಹಕ್ಕೆ ಗುಜರಾತ್ನ ಖಾವ್ಡಾದಲ್ಲಿ ಸೌರ ಇಂಧನ ಯೋಜನೆಯ ಸ್ಥಾಪನೆಗಾಗಿ ಅನುಮತಿ ನೀಡಿದೆಯೆಂಬ ಮಾಧ್ಯಮ ವರದಿಯನ್ನು ಪ್ರಸ್ತಾವಿಸಿ ವಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದ್ದರಿಂದ ಸದನವನ್ನು ಮಧ್ಯಾಹ್ನ 2:00 ಗಂಟೆಯವರೆಗೆ ಮುಂದೂಡಲಾಗಿತ್ತು.
ಲೋಕಸಭೆಯಲ್ಲಿ ಮತ್ತೆ ಸದನ ಕಲಾಪ ಆರಂಭಗೊಂಡಾಗ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಪ್ರತಿಪಕ್ಷಗಳ ವಿರೋಧದ ನಡುವೆಯೇ 2025ರ ಸಾಲಿನ ಆದಾಯ ತೆರಿಗೆ ವಿಧೇಯಕವನ್ನು ಮಂಡಿಸಿದರು ಹಾಗೂ ಅದನ್ನು ಸ್ಪೀಕರ್ ಪ್ರಸ್ತಾವನೆಗೆ ಸಲ್ಲಿಸಿದರು.
ವಕ್ಫ್ ವಿಧೇಯಕಕ್ಕೆ ಸಂಬಂಧಿಸಿದಂತೆ ವಿಪಕ್ಷ ಸದಸ್ಯರು ಸದನದಲ್ಲಿ ಕೋಲಾಹಲವೆಬ್ಬಿಸಿದ ಬಳಿಕ ಲೋಕಸಭಾದ ಕಲಾಪಗಳನ್ನು ಮಾರ್ಚ್ 10ರವರೆಗೆ ಸ್ಪೀಕರ್ ಓಂ ಬಿರ್ಲಾ ಮುಂದೂಡಿದರು. ಫೆಬ್ರವರಿ 11ರವರೆಗೆ ನಡೆದ ಬಜೆಟ್ ಅಧಿವೇಶನದ ಮೊದಲ ಹಂತವು ಶೇ.112ರಷ್ಟು ಉತ್ಪಾದಕತೆಯನ್ನು ಪ್ರದರ್ಶಿಸಿದೆ ಎಂದರು.
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ 17 ತಾಸು 23 ನಿಮಿಷ ನಡೆದಿದ್ದು, 173 ಮಂದಿ ಪಾಲ್ಗೊಂಡಿದ್ದರು. ಬಜೆಟ್ ಮೇಲಿನ ಚರ್ಚೆಯಲ್ಲಿ 16 ತಾಸು, 13 ನಿಮಿಷ ನಡೆದಿದ್ದು, 170 ಮಂದಿ ಪಾಲ್ಗೊಂಡಿದ್ದರು’’ ಎಂದು ಸ್ಪೀಕರ್ ಹೇಳಿದರು.
ಲೋಸಭಾದ ಬಜೆಟ್ ಅಧಿವೇಶನದ ಎರಡನೆ ಹಂತವು ಮಾರ್ಚ್ 10ರಿಂದ ಎಪ್ರಿಲ್ 4ರವರೆಗೆ ನಡೆಯಲಿದೆ.