ʻಪ್ರಶ್ನೆಗಾಗಿ ನಗದುʼ ಪ್ರಕರಣ: ಮಹುವಾ ಮೊಯಿತ್ರಾಗೆ ಅ. 31ರಂದು ವಿಚಾರಣೆಗೆ ಹಾಜರಾಗಲು ಸೂಚಿಸಿದ ನೈತಿಕತೆ ಸಮಿತಿ
ಮಹುವಾ ಮೊಯಿತ್ರಾ (PTI)
ಹೊಸದಿಲ್ಲಿ “ಪ್ರಶ್ನೆಗಾಗಿ ನಗದು” ವಿವಾದದಲ್ಲಿ ಸಿಲುಕಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಅವರನ್ನು ವಿಚಾರಣೆಗಾಗಿ ಲೋಕಸಭೆಯ ನೈತಿಕತೆ ಸಮಿತಿಯು ಅಕ್ಟೋಬರ್ 31ರಂದು ಹಾಜರಾಗುವಂತೆ ಸೂಚಿಸಿದೆ. ಮಹುವಾ ವಿರುದ್ಧದ ಆರೋಪಗಳು ತುಂಬಾ ಗಂಭೀರವಾಗಿವೆ ಎಂದು ಸಮಿತಿ ಅಂದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಇಂದು ಸುಮಾರು ಮೂರು ಗಂಟೆ ಸಭೆ ಸೇರಿದ ಸಮಿತಿ, ಮಹುವಾ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿಯೊಬ್ಬರಿಂದ ಹಣ ಪಡೆದಿದ್ದರು ಎಂದು ದೂರು ನೀಡಿದ್ದ ಬಿಜೆಪಿ ಸಂಸದ ನಿಷಿಕಾಂತ್ ದುಬೆ ಹಾಗೂ ವಕೀಲ ಜೈ ಅನಂತ್ ದೆಹದ್ರಾಯಿ ಅವರನ್ನು ವಿಚಾರಣೆ ನಡೆಸಿ ಮಹುವಾ ವಿರುದ್ಧ ಅವರು ಹೊರಿಸಿದ್ದ ಆರೋಪಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದೆ.
ಪ್ರಕರಣದ ವಿಸ್ತೃತ ತನಿಖೆಗಾಗಿ ಹಲವು ಪ್ರಮುಖ ಅಂಶಗಳ ಕುರಿತು ವಿವರಗಳಿಗಾಗಿ ಸಮಿತಿಯು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಗೃಹ ಸಚಿವಾಲಯಕ್ಕೆ ಪತ್ರ ಬರೆದಿರುವುದಾಗಿ ಸಮಿತಿಯ ಅಧ್ಯಕ್ಷ ವಿನೋದ್ ಸೊಂಕರ್ ಹೇಳಿದ್ದಾರೆ.
ಮಹುವಾ ಅವರು ಪ್ರಧಾನಿ ಮೋದಿ ವಿರುದ್ಧ ಗುರಿ ಮಾಡಲು ಹಾಗೂ ಅವರ ಮಾನಹಾನಿಗೈಯ್ಯಲು ಅದಾನಿ ಸಮೂಹದ ವಿಚಾರ ಬಳಸಲು ತಮ್ಮ ಸಹಾಯ ಕೇಳಿದ್ದರು ಹಾಗೂ ಪ್ರಶ್ನೆ ಕೇಳಲು ತಮ್ಮಿಂದ ನಗದು ಹಾಗೂ ಉಡುಗೊರೆಗಳಿಗೆ ಬೇಡಿಕೆ ಸಲ್ಲಿಸಿದ್ದರು ಎಂದು ಉದ್ಯಮಿ ದರ್ಶನ್ ಹಿರಾನಂದಾನಿ ಈಗಾಗಲೇ ಅಫಿಡವಿಟ್ ಸಲ್ಲಿಸಿದ್ದಾರೆಂಬುದನ್ನು ಇಲ್ಲಿ ಸ್ಮರಿಸಬಹುದು.