ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣ ; ಆರೋಪಿಗಳ ಸುಳ್ಳು ಪತ್ತೆ ಪರೀಕ್ಷೆಗೆ ಅನುಮತಿ ಕೋರಿ ಅರ್ಜಿ
Photo: PTI
ಹೊಸದಿಲ್ಲಿ: ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲಾ ಆರು ಮಂದಿಯ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ಅನುಮತಿ ಕೋರಿ ದಿಲ್ಲಿ ಪೊಲೀಸರು ಗುರುವಾರ ಇಲ್ಲಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಮುಂದೆ ಅರ್ಜಿ ಸಲ್ಲಿಸಲಾಗಿದ್ದು, ಅವರು ಕೆಲವು ಆರೋಪಿಗಳನ್ನು ಪ್ರತಿನಿಧಿಸುವ ವಕೀಲರು ಹಾಜರಾಗಿಲ್ಲ ಎಂದು ಗಮನಿಸಿ ಅರ್ಜಿಯ ವಿಚಾರಣೆಯನ್ನು ಜನವರಿ 2ಕ್ಕೆ ಮುಂದೂಡಿದರು.
ಅರ್ಜಿಯ ವಿಚಾರಣೆ ಸಂದರ್ಭ ಪೊಲೀಸರು ಆರು ಮಂದಿ ಆರೋಪಿಗಳನ್ನು ಕೂಡ ನ್ಯಾಯಾಲಯಕ್ಕೆ ಕರೆದುಕೊಂಡು ಬಂದಿದ್ದರು.
ಆರೋಪಿಗಳಾದ ಮನೋರಂಜನ್ ಡಿ, ಸಾಗರ್ ಶರ್ಮಾ, ಅಮೋಲ್ ಧನರಾಜ್ ಶಿಂಧೆ, ನೀಲಂ ದೇವಿ, ಲಲಿತ್ ಝಾ ಹಾಗೂ ಮಹೇಶ್ ಕುಮಾವತ್ ಅವರು ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ.
ಇದಕ್ಕಿಂತ ಮೊದಲು ದಿಲ್ಲಿ ಪೊಲೀಸರನ್ನು ಪ್ರತಿನಿಧಿಸಿದ್ದ ಸರಕಾರಿ ವಕೀಲ ಅಖಂಡ ಪ್ರತಾಪ್ ಸಿಂಗ್, ಈ ದಾಳಿ ಚೆನ್ನಾಗಿ ಯೋಜಿಸಿ ನಡೆಸಲಾಗಿತ್ತು ಎಂದು ತಿಳಿಸಿದರು.
ದಾಳಿಯ ಹಿಂದಿನ ನೈಜ ಉದ್ದೇಶ ತಿಳಿಯಲು ಹಾಗೂ ಅವರು ಇತರ ಶತ್ರು ದೇಶಗಳ ಅಥವಾ ಭಯೋತ್ಪಾದಕ ಸಂಘಟನೆಗಳ ಸಂಬಂಧ ಹೊಂದಿದ್ದಾರೆಯೇ ಎಂಬುದನ್ನು ಪತ್ತೆ ಮಾಡಲು ಕಸ್ಟಡಿ ವಿಚಾರಣೆ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.