ಸಂಸತ್ ಭದ್ರತೆ ಉಲ್ಲಂಘನೆ ಪ್ರಕರಣ : ಐವರು ಆರೋಪಿಗಳು ಸುಳ್ಳು ಪತ್ತೆ ಪರೀಕ್ಷೆಗೆ ಒಪ್ಪಿಗೆ
ಹೊಸದಿಲ್ಲಿ: ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಆರು ಮಂದಿ ಆರೋಪಿಗಳಲ್ಲಿ ಐವರು ತಮ್ಮನ್ನು ಸುಳ್ಳು ಪತ್ತೆ ಪರೀಕ್ಷೆ ಒಳಪಡಿಸಲು ಶುಕ್ರವಾರ ಇಲ್ಲಿನ ನ್ಯಾಯಾಲಯದ ಮುಂದೆ ಒಪ್ಪಿಗೆ ನೀಡಿದ್ದಾರೆ.
ಹೆಚ್ಚುವರಿ ಸೆಷನ್ಸ್ ನ್ಯಾಯಮೂರ್ತಿ ಹರ್ದೀಪ್ ಕೌರ್ ಅವರು ಆರೋಪಿಗಳಾದ ಮನೋರಂಜನ್ ಡಿ., ಸಾಗರ್ ಶರ್ಮಾ, ಅಮೋಲ್ ಧನರಾಜ್ ಶಿಂಧೆ, ನೀಲಂ ಆಝಾದ್, ಲಲಿತ್ ಝಾ ಹಾಗೂ ಮಹೇಶ್ ಕುಮಾವತ್ ಅವರ ಪೊಲೀಸ್ ಕಸ್ಟಡಿಯನ್ನು 8 ದಿನಗಳ ಕಾಲ ವಿಸ್ತರಿಸಿದ್ದಾರೆ.
ಆರೋಪಿಗಳಿಗೆ ಈ ಹಿಂದೆ ನೀಡಲಾಗಿದ್ದ ಕಸ್ಟಡಿ ಅವಧಿ ಇಂದು ಅಂತ್ಯಗೊಂಡ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಆರೋಪಿಗಳ ಕಸ್ಟಡಿ ವಿಸ್ತರಿಸಿದರು. ಆಝಾದ್ ಹೊರತುಪಡಿಸಿ ಇತರ ಎಲ್ಲರೂ ಸುಳ್ಳು ಪತ್ತೆ ಪರೀಕ್ಷೆಗೆ ನ್ಯಾಯಾಲಯದಲ್ಲಿ ಒಪ್ಪಿಗೆ ನೀಡಿದರು.
ಈ ಹಿಂದೆ ದಿಲ್ಲಿ ಪೊಲೀಸರು ಎಲ್ಲಾ ಆರೋಪಿಗಳ ಸುಳ್ಳು ಪತ್ತೆ ಪರೀಕ್ಷೆಗೆ ಅನುಮತಿ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.