ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣ: ಸಂಸದ ಪ್ರತಾಪ್ ಸಿಂಹ ಅವರನ್ನು ಏಕೆ ವಿಚಾರಣೆ ನಡೆಸಿಲ್ಲ?: ಕಾಂಗ್ರೆಸ್ ತರಾಟೆ
ಪ್ರತಾಪ್ ಸಿಂಹ | Photo: PTI
ಹೊಸದಿಲ್ಲಿ: ಸಂಸತ್ ಭದ್ರತಾ ಉಲ್ಲಂಘನೆ ಕುರಿತು ಕೇಂದ್ರ ಸರಕಾರವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್, ಲೋಕಸಭೆಗೆ ನುಗ್ಗಲು ಇಬ್ಬರಿಗೆ ಪಾಸ್ ವ್ಯವಸ್ಥೆ ಮಾಡಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಇದುವರೆಗೆ ಯಾಕೆ ವಿಚಾರಣೆ ನಡೆಸಿಲ್ಲ ಎಂದು ಪ್ರಶ್ನಿಸಿದೆ.
‘x’ನ ಪೋಸ್ಟ್ ನಲ್ಲಿ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಲೋಕಸಭೆಯಲ್ಲಿ ಅತ್ಯಂತ ಗಂಭೀರ ಭದ್ರತಾ ಲೋಪ ಸಂಭವಿಸಿ ನಿಖರವಾಗಿ 1 ವಾರ ಕಳೆಯಿತು. ತನಿಖೆ ಆರಂಭಿಸಲಾಗಿದೆ ಎಂದು ಪ್ರಧಾನಿ, ಗೃಹ ಸಚಿವರು ಹಾಗೂ ಲೋಕಸಭಾ ಸ್ಪೀಕರ್ ಹೇಳಿದ್ದಾರೆ. ಹಾಗೆಯೇ ಆಗಲಿ ಎಂದಿದ್ದಾರೆ.
‘‘ಆದರೆ, ಲೋಕಸಭೆಗೆ ನುಗ್ಗಲು ಇಬ್ಬರಿಗೆ ಪಾಸ್ ವ್ಯವಸ್ಥೆ ಮಾಡಿಕೊಟ್ಟ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರನ್ನು ಒಂದು ವಾರ ಕಳೆದರೂ ವಿಚಾರಣೆ ನಡೆಸಿಲ್ಲ ಯಾಕೆ?’’ ಎಂದು ಅವರು ಪ್ರಶ್ನಿಸಿದ್ದಾರೆ.
ಒಳ ನುಗ್ಗಿದವರ ಮೇಲೆಯೇ ಭಯೋತ್ಪಾದನಾ ವಿರೋಧಿ ಕಾನೂನು ಯುಪಿಎ ಅಡಿಯಲ್ಲಿ ಆರೋಪ ಹೊರಿಸಲಾಗಿರುವುದರಿಂದ ಇದೊಂದು ವಿಚಿತ್ರ ಸನ್ನಿವೇಶವಾಗಿದೆ ಎಂದು ರಮೇಶ್ ಹೇಳಿದ್ದಾರೆ.
ಈ ನಡುವೆ, ಡಿಸೆಂಬರ್ 13ರ ಘಟನೆಗೆ ಸಂಬಂಧಿಸಿ ಸಂಸತ್ತಿನಲ್ಲಿ ಗೃಹ ಸಚಿವರು ಹೇಳಿಕೆ ನೀಡುವಂತೆ, ಮೂಲಭೂತ, ನೇರ ಹಾಗೂ ನ್ಯಾಯಬದ್ಧ ಬೇಡಿಕೆ ಮುಂದಿರಿಸಿರುವುದಕ್ಕಾಗಿ 142 ಇಂಡಿಯಾ ಸಂಸದರನ್ನು ಅಮಾನತು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.