ಸಂಸತ್ ಭದ್ರತಾ ವೈಫಲ್ಯ: ರಾಜ್ಯಕ್ಕೆ ಆಗಮಿಸಿದರೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದ ಸಂಸದ ಪ್ರತಾಪ್ ಸಿಂಹ
ಬೆಂಗಳೂರು: ಸಂಸತ್ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಇಬ್ಬರು ದಾಳಿಕೋರರಿಗೆ ಸಂಸತ್ ಭವನದ ಪಾಸ್ ನೀಡಿದ್ದ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ, ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಾಜ್ಯಕ್ಕೆ ಆಗಮಿಸಿದ್ದಾರೆ.
ಡಿ. 13ರಂದು ಸಂದರ್ಶಕರ ಸೋಗಿನಲ್ಲಿ ಲೋಕಸಭೆಯ ಗ್ಯಾಲರಿಯಿಂದ ಇಬ್ಬರು ಅಪರಿಚಿತರು, ಸಂಸದರು ಕುಳಿತಿರುವ ಸ್ಥಳಕ್ಕೆ ಜಿಗಿದು ಹೊಗೆ ಬಾಂಬ್ ಸಿಡಿಸಿದ್ದರು.
ಸಂಸತ್ ಭದ್ರತಾ ವೈಫಲ್ಯ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಒಂದೇ ಒಂದು ಅಧಿಕೃತ ಹೇಳಿಕೆಯನ್ನು ನೀಡದ ಸಂಸದ ಪ್ರತಾಪ್ ಸಿಂಹ, ಈವರೆಗೂ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ನಿನ್ನೆ(ಡಿ.22) ಬೆಂಗಳೂರಿಗೆ ಆಗಮಿಸಿದ್ದ ಸಂಸದ ಮಾಧ್ಯಮಗಳ ಕಣ್ಣಿಗೆ ಬೀಲುತ್ತಿದ್ದಂತೆಯೇ ದಾಳಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.
“ ನಾನೂ ಕೂಡ ಒಬ್ಬ ಜರ್ನಲಿಸ್ಟ್, ದಯವಿಟ್ಟು ನನ್ನನ್ನು ಚೇಸ್ ಮಾಡಬೇಡಿ ” ಎಂದಷ್ಟೇ ಹೇಳಿದ್ದಾರೆ. ಈ ನಡುವೆ ಖಾಸಗಿ ಮಾಧ್ಯಮ ಪ್ರತಿನಿಧಿಯೋರ್ವನಿಗೆ, “ನೀನು ಈ ವೃತ್ತಿಗೆ ಹೊಸಬರು. ನಾನು ಐದು ವರ್ಷ ಜರ್ನಲಿಸಂ ಓದಿದ್ದೀನಿ. ಸುಮ್ಮನಿದ್ದು ಬಿಡು” ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ. ಇದೆಲ್ಲವೂ ಕ್ಯಾಮರಾದಲ್ಲಿ ಸೆರೆಯಾಗಿದೆ.