ಸಂಸತ್ತಿನ ಬಜೆಟ್ ಅಧಿವೇಶನ 2.0 : ಸರಕಾರದ ಕಾರ್ಯಸೂಚಿಯಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ, ವಕ್ಫ್ ಮಸೂದೆ !

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ : ಸಂಸತ್ತಿನ ಬಜೆಟ್ ಅಧಿವೇಶನದ ಎರಡನೇ ಹಂತ ಸೋಮವಾರ ಪುನರಾರಂಭಗೊಳ್ಳಲಿದೆ. ಮತದಾರರ ಪಟ್ಟಿಯ ದುರ್ಬಳಕೆ, ಮಣಿಪುರದಲ್ಲಿ ಹೊಸ ಹಿಂಸಾಚಾರ, ಡೊನಾಲ್ಡ್ ಟ್ರಂಪ್ ಆಡಳಿತ, ಕ್ಷೇತ್ರಗಳ ಪುನರ್ ವಿಂಗಡಣೆ, ವಕ್ಫ್ ಕಾಯ್ದೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಸರಕಾರ ಮತ್ತು ಪ್ರತಿಪಕ್ಷಗಳ ನಡುವೆ ಜಟಾಪಟಿ ನಡೆಯುವ ಸಾಧ್ಯತೆ ಇದೆ.
ಬಜೆಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು, ಅನುದಾನದ ಬೇಡಿಕೆಗಳಿಗೆ ಸಂಸತ್ತಿನ ಅನುಮೋದನೆ ಪಡೆಯುವುದು, ವಕ್ಫ್ ತಿದ್ದುಪಡಿ ಮಸೂದೆ ಸೇರಿದಂತೆ ಪ್ರಮುಖ ಶಾಸನಗಳನ್ನು ಅಂಗೀಕರಿಸುವುದು ಸರಕಾರದ ಕಾರ್ಯಸೂಚಿಯಲ್ಲಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ರಾಜೀನಾಮೆಯ ನಂತರ ಫೆಬ್ರವರಿ 13ರಿಂದ ರಾಷ್ಟ್ರಪತಿ ಆಳ್ವಿಕೆಯಲ್ಲಿರುವ ಮಣಿಪುರಕ್ಕೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಹೆಚ್ಚುವರಿಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಲಭೆ ಪೀಡಿತ ಈಶಾನ್ಯ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಘೋಷಿಸಲು ಸಂಸತ್ತಿನ ಅನುಮೋದನೆಯನ್ನು ಕೋರಿ ಶಾಸನಬದ್ಧ ನಿರ್ಣಯವನ್ನು ಮಂಡಿಸುವ ನಿರೀಕ್ಷೆಯಿದೆ.