ಸಿಬಿಲ್ ಸ್ಕೋರ್ನ ವಿಶ್ವಾಸಾರ್ಹತೆ ಮತ್ತು ಉತ್ತರದಾಯಿತ್ವ ಪ್ರಶ್ನಿಸಿದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ
"ಈ ಸಿಬಿಲ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ"

ಕಾರ್ತಿ ಚಿದಂಬರಂ | PC : Karti P Chidambaram/instagram
karti_pc
Karti P Chidambaram
karti_pc
Karti P Chidambaram
ಹೊಸದಿಲ್ಲಿ: ಭವಿಷ್ಯದಲ್ಲಿ ಸಾಲ ಮಂಜೂರಾತಿಯ ಸಾಧ್ಯತೆಗಳನ್ನು ನಿರ್ಧರಿಸಲು ಭಾರತೀಯರ ಸಾಲಗಳ ಇತಿಹಾಸವನ್ನು ನಿರ್ವಹಿಸುವ ಖಾಸಗಿ ಕಂಪನಿ ಸಿಬಿಲ್ ಸ್ಕೋರ್ನ ವಿಶ್ವಾಸಾರ್ಹತೆ ಮತ್ತು ಉತ್ತರದಾಯಿತ್ವವನ್ನು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ಬುಧವಾರ ಲೋಕಸಭೆಯಲ್ಲಿ ಪ್ರಶ್ನಿಸಿದರು.
ಸೂಕ್ತ ಪರಿಹಾರ ಕಾರ್ಯವಿಧಾನದ ಅನುಪಸ್ಥಿತಿಯಲ್ಲಿ ಬಹಳಷ್ಟು ಜನರು ಎದುರಿಸುತ್ತಿರುವ ಆರ್ಥಿಕ ತೊಂದರೆಗಳು ಉಲ್ಬಣಗೊಂಡಿವೆ ಎಂದು ಪ್ರತಿಪಾದಿಸಿದ ಅವರು, ‘ಚಿತ್ರಗುಪ್ತ ನಮ್ಮ ಈ ಲೋಕದ ಎಲ್ಲ ಚಟುವಟಿಕೆಗಳ ಲೆಕ್ಕಗಳನ್ನು ಯಮಧರ್ಮನಿಗೆ ಒಪ್ಪಿಸುವಂತೆ ಸಿಬಿಲ್ ಎಂದು ಕರೆಯಲಾಗುವ ಈ ಏಜೆನ್ಸಿ ನಮ್ಮ ಎಲ್ಲ ವಹಿವಾಟುಗಳ ದಾಖಲೆಯನ್ನು ನಿರ್ವಹಿಸುತ್ತದೆ. ನೀವು ವಾಹನ ಸಾಲ ಪಡೆಯಲು ಅಥವಾ ದೇಶದ ವಿತ್ತಸಚಿವರು ಗೃಹ ಸಾಲವನ್ನು ಪಡೆಯಲು ಬಯಸಿದರೆ ಎಲ್ಲವೂ ಸಿಬಿಲ್ ಸ್ಕೋರ್ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಈ ಸಿಬಿಲ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ,ಅದು ‘ಟ್ರಾನ್ಸ್ಯೂನಿಯನ್’ ಎಂಬ ಖಾಸಗಿ ಕಂಪನಿಯಾಗಿದೆ ’ ಎಂದು ಹೇಳಿದರು.
‘ಇದು ನಮ್ಮ ಸಾಲದ ಇತಿಹಾಸವನ್ನು ಆಧರಿಸಿ ನಮ್ಮೆಲ್ಲರನ್ನು ಲೆಕ್ಕ ಹಾಕುವ ಅಥವಾ ನಮ್ಮ ಸಾಲ ಮರುಪಾವತಿ ಸಾಮರ್ಥ್ಯವನ್ನು ನಿರ್ಧರಿಸುವ ಕಂಪನಿಯಾಗಿದೆ,ಆದರೆ ಅದು ನಮ್ಮ ಸಾಲಗಳ ಇತಿಹಾಸವನ್ನು ಸರಿಯಾಗಿ ನವೀಕರಿಸುತ್ತದೆಯೇ ಎನ್ನುವುದು ನಮಗೆ ತಿಳಿದಿಲ್ಲ. ಇಲ್ಲಿ ಯಾವುದೇ ಪಾರದರ್ಶಕತೆಯಿಲ್ಲ ಮತ್ತು ನಮಗೆ ಅದನ್ನು ಪ್ರಶ್ನಿಸಲು ಮಾರ್ಗವೂ ಇಲ್ಲ. ನಮ್ಮನ್ನು ಲೆಕ್ಕ ಹಾಕುವ ಕಂಪನಿ ಮತ್ತು ನಮ್ಮ ನಡುವೆ ಸಂಪೂರ್ಣ ಅಸಮತೆಯಿದೆ. ಪರಿಹಾರವೇ ಇಲ್ಲ ’ಎಂದ ಚಿದಂಬರಂ,‘ಪ್ರತಿ ಸಲ ನೀವು ಬ್ಯಾಂಕಿಗೆ ಹೋಗಿ ಸಾಲವನ್ನು ಸಕಾಲದಲ್ಲಿ ತೀರಿಸಿದ್ದೇನೆ ಎಂದು ಹೇಳುತ್ತೀರಿ,ಆದರೆ ಇಲ್ಲ,ನಿಮ್ಮ ಸಿಬಿಲ್ ಸ್ಕೋರ್ ಕೆಟ್ಟದಾಗಿದೆ ಎಂದು ಬ್ಯಾಂಕಿನವರು ಹೇಳುತ್ತಾರೆ. ಸಿಬಿಲ್ ಅನ್ನು ಹೇಗೆ ಸಂಪರ್ಕಿಸಬೇಕು ಎನ್ನುವುದು ನಮಗೆ ಗೊತ್ತಿಲ್ಲ. ರೈತರು ಸರಕಾರದಿಂದ ಸಬ್ಸಿಡಿಯನ್ನು ಪಡೆದಾಗ ಅವರು ಅದನ್ನು ಸಾಲ ಮರುಪಾವತಿಗೆ ಬಳಸಿದರೆ ಸಿಬಿಲ್ ಅದನ್ನು ಅಪ್ಡೇಟ್ ಮಾಡುವುದಿಲ್ಲ. ನೀವು ಎಆರ್ಸಿ(ಸಾಲ ಮರುರಚನೆ ಕಂಪನಿ)ಜೊತೆ ಇತ್ಯರ್ಥ ಮಾಡಿಕೊಳ್ಳಲು ಮುಂದಾದರೆ ಸಿಬಿಲ್ ಅದನ್ನು ಅಪ್ಡೇಟ್ ಮಾಡುವುದಿಲ್ಲ. ಹೆಚ್ಚಿನ ಪಾರದರ್ಶಕತೆ ಇರಬೇಕು’ ಎಂದರು.
ಮಂಗಳವಾರ ಬಿಜೆಪಿಯು ತಂದ ಬ್ಯಾಂಕಿಂಗ್ ಸುಧಾರಣೆ ಮಸೂದೆಯನ್ನು ಪ್ರತಿಪಕ್ಷಗಳ ಸದಸ್ಯರು ಬಲವಾಗಿ ವಿರೋಧಿಸಿದ ಹಿನ್ನೆಲೆಯಲ್ಲಿ ಚಿದಂಬರಂ ಅವರ ಈ ಹೇಳಿಕೆಗಳು ಹೊರಬಿದ್ದಿವೆ. ಮಸೂದೆಯು ಭಾರತದ ಬ್ಯಾಂಕಿಂಗ್ ಕ್ಷೇತ್ರದ ಖಾಸಗೀಕರಣದ ಉದ್ದೇಶವನ್ನು ಹೊಂದಿದೆ ಎಂದು ಪ್ರತಿಪಕ್ಷಗಳು ಆಕ್ಷೇಪಿಸಿವೆ.