ನರೇಗಾದಡಿ ಕಡಿಮೆ ವೇತನ ಕುರಿತು ಕಳವಳ ವ್ಯಕ್ತಪಡಿಸಿದ ಸಂಸದೀಯ ಸಮಿತಿ
ಸಾಂದರ್ಭಿಕ ಚಿತ್ರ | PC : PTI
ಹೊಸದಿಲ್ಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ನರೇಗಾ)ಯಡಿ ಕಡಿಮೆ ವೇತನಗಳನ್ನು ಪಾವತಿಸುತ್ತಿರುವ ಕುರಿತು ಕಳವಳಗಳನ್ನು ವ್ಯಕ್ತಪಡಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕುರಿತ ಸಂಸದೀಯ ಸ್ಥಾಯಿ ಸಮಿತಿಯು,ವೇತನವನ್ನೇಕೆ ಹಣದುಬ್ಬರ ಸೂಚ್ಯಂಕದೊಂದಿಗೆ ಜೋಡಣೆ ಮಾಡಲಾಗಿಲ್ಲ ಎಂದು ಪ್ರಶ್ನಿಸಿದೆ.
ಯೋಜನೆಯಡಿ ವೇತನಗಳನ್ನು ಹೆಚ್ಚಿಸಲು ಕಾರ್ಯವಿಧಾನವೊಂದನ್ನು ರೂಪಿಸುವಂತೆ ಸಮಿತಿಯು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವನ್ನು ಆಗ್ರಹಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.
ಗುರುವಾರ ಲೋಕಸಭೆಯಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಸಚಿವಾಲಯವನ್ನು ಟೀಕಿಸಿರುವ ಸಮಿತಿಯು,ಯೋಜನೆಯಡಿ ಕಾರ್ಮಿಕರ ವೇತನಗಳನ್ನು ಹೆಚ್ಚಿಸುವ ಬಗ್ಗೆ ಅದರ ನಿಲುವಿನಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಾಗಿಲ್ಲ ಎಂದು ಬೆಟ್ಟು ಮಾಡಿದೆ.
ವೇತನ ಪರಿಷ್ಕರಣೆ ವಿಷಯದಲ್ಲಿ ಸಚಿವಾಲಯವು ಏಕತಾನತೆಯ ಉತ್ತರಗಳನ್ನು ಕಳುಹಿಸುತ್ತಿದೆ ಎಂದು ಹೇಳಿರುವ ಸಮಿತಿಯು,ನಗರ ಪ್ರದೇಶ ಅಥವಾ ಗ್ರಾಮೀಣ ಪ್ರದೇಶವಾಗಿರಲಿ,ಹಣದುಬ್ಬರ ಮತ್ತು ಜೀವನ ವೆಚ್ಚ ಬಹುಪಟ್ಟು ಏರಿಕೆಯಾಗಿರುವುದು ಸ್ಪಷ್ಟವಾಗಿದೆ. ಈ ಕ್ಷಣದಲ್ಲಿಯೂ ಸಹ ನರೇಗಾದಡಿ ಹೆಚ್ಚಿನ ರಾಜ್ಯಗಳಲ್ಲಿ ದಿನವೊಂದಕ್ಕೆ ಸುಮಾರು 200 ರೂ.ಗಳ ವೇತನವನ್ನು ನೀಡಲಾಗುತ್ತಿದೆ. ಈ ರಾಜ್ಯಗಳಲ್ಲಿ ಇತರ ಕಾರ್ಮಿಕರು ಹೆಚ್ಚಿನ ವೇತನಗಳನ್ನು ಪಡೆಯುತ್ತಿದ್ದಾರೆ,ಹೀಗಾಗಿ ನರೇಗಾ ವೇತನವು ತರ್ಕಹೀನವಾಗಿದೆ ಎಂದು ತನ್ನ ವರದಿಯಲ್ಲಿ ಹೇಳಿದೆ.
ಯೋಜನೆಯಡಿ ವೇತನಗಳನ್ನು ಕೊನೆಯದಾಗಿ ಎಪ್ರಿಲ್ನಲ್ಲಿ ಪರಿಷ್ಕರಿಸಲಾಗಿದ್ದು,ವಿವಿಧ ರಾಜ್ಯಗಳಲ್ಲಿ ಶೇ.4ರಿಂದ ಶೇ.10ರಷ್ಟು ಹೆಚ್ಚಳವನ್ನು ಮಾಡಲಾಗಿದೆ. ಹರ್ಯಾಣ ದಿನವೊಂದಕ್ಕೆ ಗರಿಷ್ಠ 374 ರೂ.ಗಳ ವೇತನವನ್ನು ನೀಡುತ್ತಿದ್ದರೆ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ನಲ್ಲಿ 234 ರೂ.ಗಳ ಕನಿಷ್ಠ ವೇತನವನ್ನು ಪಾವತಿಸಲಾಗುತ್ತಿದೆ.
2019ರಲ್ಲಿ ತಜ್ಞರ ಸಮಿತಿಯೊಂದು ಯೋಜನೆಯಡಿ ಪ್ರತಿ ದಿನಕ್ಕೆ 375 ರೂ.ಗಳ ವೇತನವನ್ನು ಶಿಫಾರಸು ಮಾಡಿತ್ತು.
ವಿವಿಧ ರಾಜ್ಯಗಳಲ್ಲಿಯ ವೇತನ ಅಸಮಾನತೆಯನ್ನು ತನ್ನ ವರದಿಯಲ್ಲಿ ಪ್ರಮುಖ ಕಳವಳವನ್ನಾಗಿ ಎತ್ತಿ ತೋರಿಸಿರುವ ಸಂಸದೀಯ ಸಮಿತಿಯು,ತನ್ನ ನಿಲುವನ್ನು ಮರುಪರಿಶೀಲಿಸುವಂತೆ ಮತ್ತು ಯೋಜನೆಯಡಿ ವೇತನವನ್ನು ಹೆಚ್ಚಿಸಲು ಕಾರ್ಯವಿಧಾನವೊಂದನ್ನು ರೂಪಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವಾಲಯವನ್ನು ಆಗ್ರಹಿಸಿದೆ.
ಸರಕಾರವು ಅನುಸರಿಸಬೇಕಾದ ಕೆಲವು ನೀತಿ ತತ್ವಗಳನ್ನು ನಿರ್ದೇಶಿಸುವ ಸಂವಿಧಾನದ ವಿಧಿ 39ರ ಉಪನಿಯಮ (ಡಿ)ದಡಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ನಿರ್ದೇಶನದಡಿ ನರೇಗಾ ವೇತನಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರಕೂಡದು ಎಂದು ಹೇಳಿರುವ ಸಮಿತಿಯು ಯೋಜನೆಯಡಿ ಕೆಲಸದ ದಿನಗಳನ್ನು ಪ್ರತಿ ಕುಟುಂಬಕ್ಕೆ 100ರಿಂದ 150ಕ್ಕೆ ಹೆಚ್ಚಿಸುವಂತೆಯೂ ಶಿಫಾರಸು ಮಾಡಿದೆ.