ನಿಗದಿತ ಮಿತಿಗಿಂತ ಹೆಚ್ಚು ಹೆಚ್ಚು ತೂಕದ ಲಗೇಜ್ ಒಯ್ದರೆ ದಂಡ : ಪಶ್ಚಿಮ ರೈಲ್ವೆ
Photo : PTI
ಮುಂಬೈ: ಬಾಂದ್ರಾ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಯ ಬೆನ್ನಿಗೇ, ಅನುಮತಿ ನೀಡಲಾದ ನಿಗದಿತ ಮಿತಿಗಿಂತ ಹೆಚ್ಚು ತೂಕದ ಲಗೇಜ್ ಒಯ್ಯುವ ಪ್ರಯಾಣಿಕರಿಗೆ ದಂಡ ವಿಧಿಸಲಾಗುವುದು ಎಂದು ಪಶ್ಚಿಮ ರೈಲ್ವೆ ಎಚ್ಚರಿಸಿದೆ. ಇದೇ ವೇಳೆ ರೈಲು ನಿಲ್ದಾಣಗಳಲ್ಲಿ ಕಿಕ್ಕಿರಿದು ಸೇರಬೇಡಿ ಎಂದು ರೈಲು ಪ್ರಯಾಣಿಕರಿಗೆ ಮನವಿ ಮಾಡಿದೆ.
ಯಾವುದೇ ಶುಲ್ಕವಿಲ್ಲದೆ ನಿರ್ದಿಷ್ಟ ತೂಕದ ಲಗೇಜ್ ಅನ್ನು ಒಯ್ಯಲು ಪ್ರಯಾಣಿಕರಿಗೆ ಅನುಮತಿಯಿದೆ. ಆದರೆ, ಸ್ಕೂಟರ್ ಗಳು, ಬೈಸಿಕಲ್ ಗಳು ಹಾಗೂ 100 ಸೆಮೀ*100 ಸೆಮೀ*70 ಸೆಮೀ ಸುತ್ತಳತೆಯ ಸಾಮಗ್ರಿಗಳನ್ನು ರೈಲಿನಲ್ಲಿ ಉಚಿತವಾಗಿ ಕೊಂಡೊಯ್ಯಲು ಅವಕಾಶವಿಲ್ಲ ಎಂದು ಮಂಗಳವಾರ ಪಶ್ಚಿಮ ರೈಲ್ವೆ ಪ್ರಕಟಿಸಿದೆ.
ರೈಲ್ವೆ ಪ್ಲಾಟ್ ಫಾರ್ಮ್ ಗಳಲ್ಲಿ ಜನದಟ್ಟಣೆಯನ್ನು ತಪ್ಪಿಸಲು ಹಾಗೂ ಸುಗಮವಾಗಿ ಅಡ್ಡಾಡುವಂತಾಗಲು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅದು ಹೇಳಿದೆ. ಇದೇ ವೇಳೆ, ಪ್ರಯಾಣಿಕರು ತಾವು ಕೊಂಡೊಯ್ಯಬಹುದಾದ ಲಗೇಜ್ ನ ಗರಿಷ್ಠ ಮಿತಿ ನಿಯಮವನ್ನು ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.
ಕಳೆದ ರವಿವಾರ ಬಾಂದ್ರಾ ರೈಲು ನಿಲ್ದಾಣದಲ್ಲಿ ಗೋರಖ್ ಪುರ್ ಗೆ ತೆರಳುತ್ತಿದ್ದ ಅಂತ್ಯೋದಯ ಎಕ್ಸ್ ಪ್ರೆಸ್ ರೈಲು ಹತ್ತಲು ನಡೆದ ನೂಕುನುಗ್ಗಲಲ್ಲಿ 10 ಮಂದಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಆಯ್ದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಪ್ಲಾಟ್ಫಾರ್ಮ್ ಟಿಕೆಟ್ ಮಾರಾಟಕ್ಕೆ ಪಶ್ಚಿಹಮ ರೈಲ್ವೆಯು ತಾತ್ಕಾಲಿಕ ನಿರ್ಬಂಧ ಹೇರಿದ್ದು, ಈ ಆದೇಶ ನವೆಂಬರ್ 8ರವರೆಗೆ ಜಾರಿಯಲ್ಲಿರುತ್ತದೆ.