ಪಾಸ್ ಪೋರ್ಟ್ ಅರ್ಜಿದಾರರ ಜನ್ಮ ದಿನಾಂಕಕ್ಕೆ ಜನನ ಪ್ರಮಾಣ ಪತ್ರವೇ ಪುರಾವೆ: ಕೇಂದ್ರ ಸರಕಾರ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ : ಕೇಂದ್ರ ಸರಕಾರ ಪಾಸ್ ಪೋರ್ಟ್ ನಿಯಮಗಳಿಗೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿ ಪ್ರಕಾರ 2023 ಅಕ್ಟೋಬರ್ 1ರಂದು ಅಥವಾ ಆನಂತರ ಜನಿಸಿದ ಪಾಸ್ ಪೋರ್ಟ್ ಅರ್ಜಿದಾರರಿಗೆ ಸೂಕ್ತ ಪ್ರಾಧಿಕಾರ ನೀಡುವ ಜನನ ಪ್ರಮಾಣ ಪತ್ರವೇ ಜನ್ಮ ದಿನಾಂಕದ ಏಕೈಕ ಪುರಾವೆಯಾಗಿದೆ.
1980ರ ಪಾಸ್ ಪೋರ್ಟ್ ನಿಯಮಗಳಿಗೆ ತಿದ್ದುಪಡಿ ತಂದಿರುವ ಕುರಿತು ಸರಕಾರ ಈ ವಾರ ಅಧಿಕೃತ ಟಿಪ್ಪಣಿಯನ್ನು ಹೊರಡಿಸಿದೆ. ಈ ತಿದ್ದುಪಡಿ ಅಧಿಕೃತವಾಗಿ ಗಜೆಟ್ನಲ್ಲಿ ಪ್ರಕಟವಾದ ಬಳಿಕ ನೂತನ ನಿಯಮ ಜಾರಿಗೆ ಬರಲಿದೆ.
ನೂತನ ನಿಯಮದ ಪ್ರಕಾರ ಜನನ ಹಾಗೂ ಮರಣಗಳ ರಿಜಿಸ್ಟ್ರಾರ್, ಪುರಸಭೆ ಅಥವಾ ಜನನ ಹಾಗೂ ಮರಣ ನೋಂದಣಿ ಕಾಯ್ದೆ, 1999 ಅಡಿಯಲ್ಲಿ ಅಧಿಕಾರ ಹೊಂದಿರುವ ಯಾವುದೇ ಇತರ ಪ್ರಾಧಿಕಾರ ನೀಡುವ ಜನನ ಪ್ರಮಾಣಪತ್ರವನ್ನು 2023 ಅಕ್ಟೋಬರ್ 1ರಂದು ಹಾಗೂ ಅನಂತರ ಜನಿಸುವ ವ್ಯಕ್ತಿಗಳ ಜನನ ದಿನಾಂಕದ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ.
ಇತರ ಅರ್ಜಿದಾರರು ಚಾಲನಾ ಪರವಾನಿಗೆ ಅಥವಾ ಶಾಲಾ ವರ್ಗಾವಣೆ ಪತ್ರದಂತಹ ಪರ್ಯಾಯ ದಾಖಲೆಗಳನ್ನು ಜನನ ದಿನಾಂಕದ ಪುರಾವೆಯಾಗಿ ಸಲ್ಲಿಸಬಹುದು.