ಚೆನ್ನೈ ಆಸ್ಪತ್ರೆಯಲ್ಲಿ ರೋಗಿಯೋರ್ವರ ಪುತ್ರನಿಂದ ವೈದ್ಯರಿಗೆ ಚೂರಿ ಇರಿತ
ಡಾ. ಬಾಲಾಜಿ (Photo: indiatoday.in)
ಚೆನ್ನೈ: ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ವೈದ್ಯರೊರ್ವರಿಗೆ ರೋಗಿಯೋರ್ವರ ಪುತ್ರ ಚೂರಿಯಿಂದ 7 ಬಾರಿ ಇರಿದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಬಾಲಾಜಿ ಅವರಿಗೆ ಏಳು ಬಾರಿ ಚೂರಿಯಿಂದ ಇರಿಯಲಾಗಿದ್ದು, ಗಾಯಗೊಂಡ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಆರೋಪಿಯನ್ನು ಚೆನ್ನೈ ನಿವಾಸಿ ವಿಘ್ನೇಶ್ ಎಂದು ಗುರುತಿಸಲಾಗಿದ್ದು, ಆತನ ತಾಯಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲೈಂಜರ್ ಸೆಂಟಿನರಿ ಆಸ್ಪತ್ರೆ (Kalaignar Centenary Super Specialty Hospital) ಕ್ಯಾನ್ಸರ್ ವಾರ್ಡ್ ನಲ್ಲಿ ಈ ಘಟನೆ ನಡೆದಿದ್ದು, ಡಾ.ಬಾಲಾಜಿ ಕೆಲಸ ಮಾಡುತ್ತಿದ್ದ ವೇಳೆ ವಿಘ್ನೇಶ್ ಚಾಕುವಿನಿಂದ ಇರಿದಿದ್ದಾನೆ. ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಗಾಯಗೊಂಡ ವೈದ್ಯರಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ಮತ್ತು ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಸೂಚಿಸಿರುವುದಾಗಿ ಹೇಳಿದ್ದಾರೆ.
ʼಕಲೈಂಜರ್ ಸೆಂಟಿನರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ.ಬಾಲಾಜಿ ಅವರಿಗೆ ರೋಗಿಯೋರ್ವರ ಕುಟುಂಬಸ್ಥರು ಚಾಕುವಿನಿಂದ ಇರಿದಿರುವುದು ಆಘಾತಕಾರಿಯಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಯನ್ನು ತಕ್ಷಣವೇ ಬಂಧಿಸಲಾಗಿದೆ. ಗಾಯಾಳು ವೈದ್ಯರಿಗೆ ಎಲ್ಲಾ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದೇನೆ. ಈ ಬಗ್ಗೆ ವಿವರವಾದ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.