ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಅಧಿಕಾರಿಗಳಿಗೆ ದುಡ್ಡು ಮಾಡುವ ಅಸ್ತ್ರ: ಪಟ್ನಾ ಹೈಕೋರ್ಟ್ ಅಸಮಾಧಾನ
ಸಾಂದರ್ಭಿಕ ಚಿತ್ರ
ಪಟ್ನಾ,: ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಅಕ್ರಮ ಮದ್ಯ ವ್ಯಾಪಾರಕ್ಕೆ ದಾರಿ ಮಾಡಿಕೊಟ್ಟಿದ್ದು, ಸರಕಾರಿ ಅಧಿಕಾರಿಗಳಿಗೆ ಭಾರೀ ದುಡ್ಡುಮಾಡುವ ಅಸ್ತ್ರವಾಗಿ ಬಿಟ್ಟಿದೆ ಎಂದು ಪಟ್ನಾ ಹೈಕೋರ್ಟ್ ಶನಿವಾರ ಅಸಮಾಧಾನ ವ್ಯಕ್ತಪಡಿಸಿದೆ.
ಸಂವಿಧಾನದ 47ನೇ ವಿಧಿಯನ್ನು ಗಮನದಲ್ಲಿರಿಸಿಕೊಂಡ ಬಿಹಾರ ಮದ್ಯ ನಿಷೇಧ ಮತ್ತು ಅಬಕಾರಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆಯಾದರೂ, ಅದು ಐತಿಹಾಸಿಕ ಪ್ರಮಾದವಾಗಿ ಪರಿಣಮಿಸಿದೆ ಎಂದು ನ್ಯಾಯಮೂರ್ತಿ ಪೂರ್ಣೇಂದು ಸಿಂಗ್ ನೋವು ವ್ಯಕ್ತಪಡಿಸಿದ್ದಾರೆ.
ಔಷಧೀಯ ಉದ್ದೇಶಗಳನ್ನು ಹೊರತುಪಡಿಸಿ ಅಮಲೇರಿಸುವ ಪಾನೀಯಗಳು ಹಾಗೂ ಮಾದಕದ್ರವ್ಯಗಳ್ನು ನಿಷೇಧಿಸಲು ಸರಕಾರವು ಮುತುವರ್ಜಿ ವಹಿಸಬೇಕೆಂದು ಸಂವಿಧಾನದ 47ನೇ ವಿಧಿಯು ಹೇಳುತ್ತದೆ. ಆದರೆ ಇದು ಸರಕಾರಿ ನೀತಿಯ ನಿರ್ದೇಶಾತ್ಮಕ ತತ್ವಗಳಾಗಿಯೇ ಹೊರತು ಕಾನೂನಿಗೆ ಒಳಪಟ್ಟಿರುವುದಿಲ್ಲವೆಂದು ಹೇಳಿದೆ.
ಬಿಹಾರದಲ್ಲಿ ಮದ್ಯದ ಮಾರಾಟ ಹಾಗೂ ಸೇವನೆಯನ್ನು ಬಿಹಾರ ಮದ್ಯ ನಿಷೇಧ ಹಾಗೂ ಅಬಕಾರಿ ಕಾಯ್ದೆಯಡಿ 2016ರ ಎಪ್ರಿಲ್ನಿಂದ ನಿಷೇಧಿಸಲಾಗಿದೆ. ಆದಾಗ್ಯೂ ರಾಜ್ಯದಲ್ಲಿ ಕಳ್ಳಭಟ್ಟಿ ಮದ್ಯ ಸೇವಿಸಿ ಜನರು ಮೃತಪಟ್ಟ ಅಥವಾ ಅಸ್ವಸ್ಥಗೊಂಡ ಘಟನೆಗಳು ಪದೇ ಪದೇ ವರದಿಯಾಗುತ್ತಿವೆ.
ಪಟ್ನಾದ ಬೈಪಾಸ್ ಪೊಲೀಸ್ ಠಾಣೆಯ ನಿರೀಕ್ಷಕರಾದ ಮುಕೇಶ್ ಕುಮಾರ್ ಪಾಸ್ವಾನ್ ಅವರ ವಿರುದ್ಧ ಜಾರಿಗೊಳಿಸಲಾದ ಹಿಂಬಡ್ತಿ ಆದೇಶವನ್ನು ತಳ್ಳಿಹಾಕಿದ ಸಂದರ್ಭ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ರಾಜ್ಯ ಅಬಕಾರಿ ಇಲಾಖೆಯು ಗೋದಾಮೊಂದರ ಮೇಲೆ ನಡೆಸಿದ ದಾಳಿಯಲ್ಲಿ 4 ಲಕ್ಷ ರೂ. ಮೌಲ್ಯದ ಅಕ್ರಮ ವಿದೇಶಿ ಮದ್ಯ ಪತ್ತೆಯಾದ ಬಳಿಕ ಅವರನ್ನು 2020ರ ನವೆಂಬರ್ನಲ್ಲಿ ಹಿಂಬಡ್ತಿಗೊಳಿಸಲಾಗಿತ್ತು. ಮುಕೇಶ್ ಕುಮಾರ್ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ಠಾಣೆಯ ಸಮೀಪದಲ್ಲೇ ಈ ಗೋದಾಮು ಇದ್ದಿತ್ತು. ಬಿಹಾರ ಮದ್ಯನಿಷೇಧ ಕಾಯ್ದೆಯನ್ನು ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸುವ ಮೂಲಕ ಸರಕಾರಿ ಅಧಿಕಾರಿಯ ನಡವಳಿಕೆ ಕುರಿತ ನಿಯಮ-3)1) ಅನ್ನು ಉಲ್ಲಂಘಿಸಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು.