ಹಿಂದಿ ವಿರೋಧಿಸುವವರು ತಮಿಳು ಚಿತ್ರ ಹಿಂದಿಗೆ ಡಬ್ ಆಗುವುದನ್ನು ವಿರೋಧಿಸುತ್ತಿಲ್ಲ: ಡಿಎಂಕೆಗೆ ಕುಟುಕಿದ ಪವನ್ ಕಲ್ಯಾಣ್
ಆಂಧ್ರಪ್ರದೇಶದ ಡಿಸಿಎಂ ಆರೋಪಕ್ಕೆ ಡಿಎಂಕೆ ಪ್ರತಿಕ್ರಿಯಿಸಿದ್ದು ಹೀಗೆ..

ಪವನ್ ಕಲ್ಯಾಣ್ (PTI)
ಹೊಸದಿಲ್ಲಿ: ವಾಣಿಜ್ಯ ಲಾಭಕ್ಕಾಗಿ ತಮಿಳು ಚಿತ್ರಗಳು ಹಿಂದಿಗೆ ಡಬ್ ಆಗಲು ಅವಕಾಶ ನೀಡುವ ತಮಿಳುನಾಡು ರಾಜಕಾರಣಿಗಳು, ಹಿಂದಿ ಹೇರಿಕೆಯನ್ನು ಮಾತ್ರ ಏಕೆ ವಿರೋಧಿಸುತ್ತಿದ್ದಾರೆ ಎಂದು ನಟ, ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರಶ್ನಿಸಿದ್ದಾರೆ. ಆ ಮೂಲಕ ಭಾಷಾ ನೀತಿ ವಿವಾದದ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ.
ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಹಿಂದಿ ಹೇರಿಕೆಯನ್ನು ವಿರೋಧಿಸುತ್ತಾ ಬರುತ್ತಿರುವ ತಮಿಳುನಾಡಿನ ಕುರಿತು ಚರ್ಚೆಗಳು ಭುಗಿಲೆದ್ದಿರುವಾಗಲೇ ಪವನ್ ಕಲ್ಯಾಣ್ ರಿಂದ ಈ ಹೇಳಿಕೆ ಹೊರ ಬಿದ್ದಿದೆ. ಈ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಡಿಎಂಕೆ ನಾಯಕರು, ವ್ಯಾವಹಾರಿಕ ನಿರ್ಧಾರದೊಂದಿಗೆ ಭಾಷಾ ನೀತಿಯನ್ನು ಸಮೀಕರಿಸುವುದು ದೀರ್ಘಕಾಲದಿಂದ ತಮಿಳುನಾಡು ತಳೆದಿರುವ ಭಾಷಾ ನಿಲುವನ್ನು ನಿರ್ಲಕ್ಷಿಸುವ ತೆಳು ಸರಳೀಕರಣ ವಾದವಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಇದಕ್ಕೂ ಮುನ್ನ, ಎನ್ಡಿಎ ಮೈತ್ರಿಕೂಟದ ಅಂಗ ಪಕ್ಷವಾದ ಜನಸೇನಾ ಸಂಸ್ಥಾಪಕ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬೆಂಬಲಿಗರಾದ ಪವನ್ ಕಲ್ಯಾಣ್, ಹಿಂದಿ ವಿರುದ್ಧ ಪ್ರತಿರೋಧದ ನಿಲುವು ತಳೆದಿರುವ ತಮಿಳುನಾಡು ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ತಮಿಳು ಚಿತ್ರಗಳನ್ನು ರಾಷ್ಟ್ರೀಯ ಮಟ್ಟದ ಪ್ರೇಕ್ಷಕರಿಗೆ ತಲುಪಿಸಲು ಹಿಂದಿಗೆ ನಿರಂತರವಾಗಿ ಡಬ್ ಮಾಡುತ್ತಿರುವಾಗ, ತಮಿಳುನಾಡು ನಾಯಕರೇಕೆ ಹಿಂದಿ ವಿರುದ್ಧ ಪ್ರತಿಭಟಿಸುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದರು.
“ಯಾಕೆ ಕೆಲವರು ಸಂಸ್ಕೃತವನ್ನು ಟೀಕಿಸುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಹಣಕಾಸು ಲಾಭಕ್ಕಾಗಿ ತಮಿಳು ಚಿತ್ರಗಳು ಹಿಂದಿಗೆ ಡಬ್ ಆಗಲು ಅವಕಾಶ ನೀಡುತ್ತಿರುವ ತಮಿಳುನಾಡು ರಾಜಕಾರಣಿಗಳೇಕೆ ಹಿಂದಿಯನ್ನು ವಿರೋಧಿಸುತ್ತಿದ್ದಾರೆ? ಅವರಿಗೆ ಬಾಲಿವುಡ್ ನಿಂದ ಆರ್ಥಿಕ ಲಾಭ ಬೇಕು, ಆದರೆ, ಹಿಂದಿಯನ್ನು ಅಂಗೀಕರಿಸಲು ಮಾತ್ರ ನಿರಾಕರಿಸುತ್ತಾರೆ. ಇದು ಎಂತಹ ತರ್ಕ?” ಎಂದು ಅವರು ಪ್ರಶ್ನಿಸಿದ್ದರು.
ಪವನ್ ಕಲ್ಯಾಣ್ ರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಡಿಎಂಕೆ, ತಮಿಳುನಾಡಿನಲ್ಲಿ ಈಗಾಗಲೇ ಹಿಂದಿ ಪ್ರಚಾರ ಸಭೆಗಳಿದ್ದು, ಅವು ಹಿಂದಿ ಕಲಿಕೆಯಲ್ಲಿ ಆಸಕ್ತಿ ಇರುವವರಿಗೆ ಸ್ವಯಂಪ್ರೇರಿತವಾಗಿ ಹಿಂದಿ ಬೋಧಿಸುತ್ತಿವೆ ಎಂದು ತನ್ನ ಭಾಷಾ ನೀತಿ ನಿಲುವನ್ನು ಸಮರ್ಥಿಸಿಕೊಂಡಿದೆ. “ಒಂದು ವೇಳೆ ಜನರು ಹಿಂದಿ ಕಲಿಯಲು ಬಯಸಿದರೆ ಅದಕ್ಕೆ ಸ್ವಾಗತವಿದೆ. ಆದರೆ, ಕೇಂದ್ರ ಸರಕಾರವು ಹಿಂದಿ ಕಲಿಕೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ ಅಥವಾ ಪಿಎಂ-ಶ್ರೀ ಶಾಲೆಗಳಂಥ ನೀತಿಗಳ ಮೂಲಕ ಕಡ್ಡಾಯಗೊಳಿಸಲು ಮುಂದಾದಾಗ ಸಮಸ್ಯೆ ಉದ್ಭವಿಸುತ್ತದೆ” ಎಂದು ಡಿಎಂಕೆ ನಾಯಕ ಹಫೀಝುಲ್ಲಾ ಹೇಳಿದ್ದಾರೆ.
ಹಫೀಝುಲ್ಲಾರ ಹೇಳಿಕೆಯನ್ನು ಪುನರುಚ್ಚರಿಸಿರುವ ಹಿರಿಯ ಡಿಎಂಕೆ ನಾಯಕ ಟಿ.ಕೆ.ಎಸ್.ಇಳಂಗೋವನ್, ಇದು ಎಂದಿಗೂ ಭಾಷೆಯ ಕುರಿತ ತಮಿಳುನಾಡಿನ ನಿಲುವಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಆದರೆ, ಪವನ್ ಕಲ್ಯಾಣ್ ರ ಹೇಳಿಕೆಯನ್ನು ಸಮರ್ಥಿಸಿರುವ ಬಿಜೆಪಿ, ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ದಕ್ಷಿಣದ ರಾಜ್ಯಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಬೇಕಿದೆ ಎಂದು ಕರೆ ನೀಡಿದೆ.