ನಾಗಪುರ | 2000 ರೂ. ಮುಖಬೆಲೆ ನೋಟು ವಿನಿಮಯ ಜಾಲದ ಕಿಂಗ್ ಪಿನ್ ಆಗಿದ್ದ ಕಡಲೆ ಬೀಜ ವ್ಯಾಪಾರಿ!
Photo : PTI
ನಾಗಪುರ: 2000 ರೂ. ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಚಲಾವಣೆಯಿಂದ ಹಿಂಪಡೆದ ನಂತರ, ಕಮಿಷನ್ ಆಧಾರದಲ್ಲಿ ಅವುಗಳನ್ನು ವಿನಿಮಯ ಮಾಡುತ್ತಿದ್ದ ಜಾಲವೊಂದನ್ನು ನಾಗಪುರ ಪೊಲೀಸರು ಭೇದಿಸಿದ್ದು, ಈ ಸಂಬಂಧ ಓರ್ವ ಕಡಲೆ ಬೀಜ ವ್ಯಾಪಾರಿ ಸೇರಿದಂತೆ ಇನ್ನೂ ಮೂವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಒಬ್ಬನಾಗಿರುವ ನಂದಿಲಾಲ್ ಮೌರ್ಯ, ರಿಸರ್ವ್ ಬ್ಯಾಂಕ್ ಕಚೇರಿ ಹಾಗೂ ಮಹಾರಾಷ್ಟ್ರ ವಿಧಾನ ಭವನ ಇರುವ ಚೌಕ ಪ್ರದೇಶದ ಬಳಿ ತಳ್ಳು ಗಾಡಿಯಲ್ಲಿ ಕಡಲೆಬೀಜ ಹಾಗೂ ತಿಂಡಿತಿನಿಸುಗಳ ಮಾರಾಟ ಮಾಡುವ ವ್ಯಾಪಾರಿ ಎನ್ನಲಾಗಿದೆ.
2000 ರೂ. ಮುಖಬೆಲೆಯ ನೋಟುಗಳನ್ನು ಕಮಿಷನ್ ಆಧಾರದಲ್ಲಿ ವಿನಿಮಯ ಮಾಡಲು ಓರ್ವ ಬಡ ಪುರುಷ ಹಾಗೂ ಮಹಿಳೆಯನ್ನು ಮೌರ್ಯ ಇಟ್ಟುಕೊಂಡಿದ್ದ ಎಂದು ಹೇಳಲಾಗಿದೆ. ಅವರು 2000 ರೂ. ಮುಖಬೆಲೆಯ ನೋಟುಗಳನ್ನು 500 ರೂ. ಮುಖಬೆಲೆಯ ನೋಟುಗಳಿಗೆ ಕ್ರಮಬದ್ಧವಾಗಿ ವಿನಿಮಯ ಮಾಡಿಕೊಳ್ಳಲು ತಮ್ಮ ಆಧಾರ್ ಚೀಟಿಯ ವಿವರಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗೆ ಸಲ್ಲಿಸುತ್ತಿದ್ದರು ಎಂದು ರವಿವಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನುಳಿದ ಮೂವರು ಬಂಧಿತ ಆರೋಪಿಗಳನ್ನು ರೋಹಿತ್ ಬಾವ್ನೆ (34), ಕಿಶೋರ್ ಬಹೋರಿಯ (30) ಹಾಗೂ ಅನಿಲ್ ಜೈನ್ (56) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮಧ್ಯಪ್ರದೇಶದ ಜಬಲ್ಪುರ್ ನಿವಾಸಿಗಳಾಗಿದ್ದು, ಈ ಹಗರಣದ ಕಿಂಗ್ ಪಿನ್ ಗಳು ಎಂದು ಶಂಕಿಸಲಾಗಿದೆ.
ಮೇ 19, 2023ರಂದು 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿತ್ತು.