ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆ; ಹೆಚ್ಚಿದ ಜನಸಾಮಾನ್ಯರ ಸಂಕಷ್ಟ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ದೇಶದ ಸಗಟು ಮಾರುಕಟ್ಟೆಗಳಲ್ಲಿ ಪ್ರತಿ ಕೆಜಿಗೆ 40-60 ರೂ.ಇದ್ದ ಈರುಳ್ಳಿ ಬೆಲೆಗಳು 70-80 ರೂ.ಗೆ ಏರಿಕೆಯಾಗಿವೆ. ನ.8ಕ್ಕೆ ಇದ್ದಂತೆ ಕೆಲವು ಪ್ರದೇಶಗಳಲ್ಲಿ ಕೆಜಿಗೆ 80 ರೂ.ದರದಲ್ಲಿ ಈರುಳ್ಳಿ ಮಾರಾಟವಾಗಿದೆ. ಬೆಲೆ ಏರಿಕೆ ಗ್ರಾಹಕರನ್ನು ಹತಾಶರನ್ನಾಗಿಸಿದ್ದು,ಈ ಅಗತ್ಯ ಸಾಮಗ್ರಿಯ ಹೆಚ್ಚುತ್ತಿರುವ ವೆಚ್ಚಗಳಿಗೆ ಹೊಂದಿಕೊಳ್ಳಲು ಪರದಾಡುತ್ತಿದ್ದಾರೆ.
‘ಈರುಳ್ಳಿ ಬೆಲೆ ಪ್ರತಿ ಕೆಜಿಗೆ 60 ರೂ.ನಿಂದ 70 ರೂ.ಗೆ ಏರಿದೆ. ನಾವು ಮಂಡಿಗಳಿಂದ ಈರುಳ್ಳಿಯನ್ನು ಖರೀದಿಸುತ್ತೇವೆ. ಹೀಗಾಗಿ ನಾವು ಅಲ್ಲಿ ತೆರುವ ಬೆಲೆಗಳು ಇಲ್ಲಿ ನಮ್ಮ ಮಾರಾಟ ಬೆಲೆಗಳ ಮೇಲೆ ನೇರ ಪರಿಣಾಮವನ್ನು ಬೀರುತ್ತವೆ. ಬೆಲೆ ಏರಿಕೆಯಿಂದಾಗಿ ಮಾರಾಟ ಕುಸಿದಿದೆ,ಆದರೆ ಆಹಾರದ ಪ್ರಮುಖ ಭಾಗವಾಗಿರುವುದರಿಂದ ಜನರು ಈಗಲೂ ಈರುಳ್ಳಿಯನ್ನು ಖರೀದಿಸುತ್ತಿದ್ದಾರೆ’ ಎಂದು ದಿಲ್ಲಿ ಮಾರುಕಟ್ಟೆಯಲ್ಲಿನ ವ್ಯಾಪಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.
ಬೆಲೆ ಏರಿಕೆಯ ಬಗ್ಗೆ ಗ್ರಾಹಕರೂ ಕಳವಳಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
‘ಋತುಮಾನಕ್ಕೆ ಅನುಗುಣವಾಗಿ ಈರುಳ್ಳಿ ಬೆಲೆಯು ಇಳಕೆಯಾಗಬೇಕಿದ್ದರೂ ಅದು ಹೆಚ್ಚುತ್ತಲೇ ಇದೆ. ನಾನು ಈಗಷ್ಟೇ ಕೆಜಿಗೆ 70 ರೂ.ದರದಲ್ಲಿ ಈರುಳ್ಳಿ ಖರೀದಿಸಿದ್ದೇನೆ. ಈ ಬೆಲೆ ಏರಿಕೆ ನಮ್ಮ ಆಹಾರ ಪದ್ಧತಿಯ ಮೇಲೆ ಪರಿಣಾಮ ಬೀರಿದೆ. ತರಕಾರಿಗಳ,ವಿಶೇಷವಾಗಿ ನಾವು ನಿತ್ಯ ಬಳಸುವ ಆಹಾರ ಸಾಮಗ್ರಿಗಳ ಬೆಲೆಗಳನ್ನು ಇಳಿಸುವಂತೆ ನಾನು ಸರಕಾರವನ್ನು ಆಗ್ರಹಿಸುತ್ತೇನೆʼ ಎಂದು ದಿಲ್ಲಿಯ ಫೈಜಾ ಹೇಳಿದರು.
ಬೆಲೆ ಏರಿಕೆ ದಿಲ್ಲಿ ಮತ್ತು ಮುಂಬೈನಂತಹ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ, ದೇಶಾದ್ಯಂತದ ಬಳಕೆದಾರರಿಗೆ ಇದರ ಬಿಸಿ ತಟ್ಟಿದೆ.