“ಜನರು ಮಾಂಸ ತಿನ್ನುತ್ತಾರೆ… ಆ ಕಾರಣದಿಂದ ಭೂ ಕುಸಿತವಾಗುತ್ತಿದೆ…”
ಹಿಮಾಚಲಪ್ರದೇಶ ಭೂ ಕುಸಿತದ ಬಗ್ಗೆ ಐಐಟಿ ಮಂಡಿಯ ನಿರ್ದೇಶಕ ವಿಲಕ್ಷಣ ವಾದ!
ಲಕ್ಷೀಧರ್ ಬೆಹ್ರಾ | Photo: NDTV
ಹೊಸದಿಲ್ಲಿ : ಪ್ರಾಣಿಗಳ ಮೇಲಿನ ಹಿಂಸೆಯಿಂದ ಹಿಮಾಚಲ ಪ್ರದೇಶದಲ್ಲಿ ಭೂ ಕುಸಿತ ಮತ್ತು ಮೇಘಸ್ಪೋಟಗಳು ಸಂಭವಿಸುತ್ತಿವೆ. ಹಾಗಾಗಿ ಮಾಂಸ ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಹೇಳುವ ಮೂಲಕ ಹಿಮಾಚಲ ಪ್ರದೇಶದ ಮಂಡಿ ಐಐಟಿ ನಿರ್ದೇಶಕ ಲಕ್ಷೀಧರ್ ಬೆಹ್ರಾ ವಿವಾದಕ್ಕೆ ನಾಂದಿ ಹಾಡಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಪ್ರಾಣಿ ವಧೆಯನ್ನು ನಿಲ್ಲಿಸದಿದ್ದರೆ ಹಿಮಾಚಲ ಪ್ರದೇಶವು ಅವನತಿ ಹೊಂದುತ್ತದೆ. ಮುಗ್ಧ ಪ್ರಾಣಿಗಳಿಗೆ ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧವಿದೆ. ಆದರೂ ಜನರು ತಮ್ಮ ಕೌರ್ಯವನ್ನು ನಿಲ್ಲಿಸುತ್ತಿಲ್ಲ. ಮಾಂಸ ತಿನ್ನುತ್ತಲೇ ಇದ್ದಾರೆ. ಪ್ರಾಣಿ ವಧೆ ನಡೆಯುತ್ತಲೇ ಇದೆ. ಇದೇ ಕಾರಣಕ್ಕೆ ಹಿಮಾಚಲ ಪ್ರದೇಶದಲ್ಲಿ ಮತ್ತೆ ಮತ್ತೆ ಭೂಕುಸಿತಗಳು ಸಂಭವಿಸುತ್ತಿವೆ ಎಂದು ಬೆಹರಾ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಲು ದೇಶದ ಎಂಟು ಐಐಟಿಗಳಲ್ಲಿ ಒಂದಾಗಿರುವ ಹಿಮಾಚಲ ಪ್ರದೇಶದ ಮಂಡಿ ಐಐಟಿ ನಿರ್ದೇಶಕ ಲಕ್ಷೀಧರ್ ಬೆಹ್ರಾ ಅವರು ಲಭ್ಯರಾಗಿಲ್ಲ. ಟ್ವಿಟರ್ನಲ್ಲಿ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಯೋಫಿಸಿಕ್ಸ್ನ ಪ್ರಾಧ್ಯಾಪಕ ಗೌತಮ್ ಮೆನನ್, “ಐಐಟಿ ಮಂಡಿಯ ನಿರ್ದೇಶಕರ ದೃಷ್ಟಿಕೋನದ ಬಗ್ಗೆ ಬೇಸರವಿದೆ. ಬೆಹ್ರಾ ಅವರು ಈ ರೀತಿಯ ವಿವಾದಿತ ಹೇಳಿಕೆ ನೀಡುವುದು ಇದೇ ಮೊದಲಲ್ಲ. ಕಳೆದ ವರ್ಷ ತನ್ನ ಸ್ನೇಹಿತನ ಅಪಾರ್ಟ್ಮೆಂಟ್ನಲ್ಲಿ ದುಷ್ಠ ಶಕ್ತಿಗಳನ್ನು ಹೊಡದೋಡಿಸಲು ಮಂತ್ರಗಳನ್ನು ಪಠಿಸಿದ್ದೆ ಎಂದು ಹೇಳಿ ಸುದ್ದಿಯಾಗಿದ್ದರು” ಎಂದಿದ್ದಾರೆ.