ಪೂರ್ವ ಭಾರತದ ಜನ ಚೀನಿಯರಂತೆ, ದಕ್ಷಿಣದವರು ಆಫ್ರಿಕದವರಂತೆ ಕಾಣುತ್ತಾರೆ: ಸ್ಯಾಮ್ ಪಿತ್ರೋಡಾ
Photo: PTI
ಹೊಸದಿಲ್ಲಿ : ಪೂರ್ವ ಭಾರತದ ಜನರು ಚೀನಿಯರಂತೆ ಕಂಡರೆ, ಪಶ್ಚಿಮದ ಜನರು ಅರಬ್ಬರಂತೆ ಕಾಣಿಸುತ್ತಾರೆ. ಉತ್ತರ ಭಾರತದ ಜನರು ಬಿಳಿಯರಂತೆ ಕಂಡರೆ, ದಕ್ಷಿಣ ಭಾರತದ ಜನರು ಆಫ್ರಿಕದವರಂತೆ ಕಾಣಿಸುತ್ತಾರೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಮಾತ್ರ ಎಲ್ಲರನ್ನೂ ಒಟ್ಟಿಗೆ ನೋಡಲು ಸಾಧ್ಯ. ಭಾರತದಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಜೀವಿಸುತ್ತಿದ್ದೇವೆ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಸ್ಯಾಮ್ ಪಿತ್ರೋಡಾ ಅವರು ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
“ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇಡೀ ಜಗತ್ತಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ದೇಶದ ಜನರು ವಿವಿಧ ಭಾಷೆ, ಆಹಾರ ಪದ್ಧತಿಯನ್ನು ಗೌರವಿಸುತ್ತಾರೆ. ಇದು ನಾನು ನಂಬುವ ಭಾರತ” ಎಂದು ಪಿತ್ರೋಡಾ ಹೇಳಿದ್ದಾರೆ.
‘ಭಾರತದ ಕಲ್ಪನೆಯು ಪ್ರಜಾಪ್ರಭುತ್ವ, ಭ್ರಾತೃತ್ವ ಮತ್ತು ಸ್ವಾತಂತ್ರ್ಯದಲ್ಲಿ ಬೇರೂರಿತ್ತು. ಆದರೆ, ಈಗ ‘ರಾಮ ನವಮಿ’, ‘ರಾಮ ಮಂದಿರ’ದಿಂದ ಸವಾಲನ್ನು ಎದುರಿಸುತ್ತಿದೆ. ಯಾವಾಗಲೂ ದೇವಸ್ಥಾನಗಳಿಗೆ ಭೇಟಿ ನೀಡುವ ಪ್ರಧಾನಿ ನರೇಂದ್ರ ಮೋದಿಯವರು ಒಬ್ಬ ಭಾರತೀಯ ನಾಯಕನಂತೆ ಮಾತನಾಡದೆ, ಬಿಜೆಪಿಯವರಂತೆಯೇ ಮಾತನಾಡುತ್ತಾರೆ’ ಎಂದು ಪಿತ್ರೋಡಾ ಪ್ರತಿಪಾದಿಸಿದ್ದಾರೆ.