ರಾಮನವಮಿ ಆಚರಣೆ ವೇಳೆ ಸಂಘರ್ಷ: ಶಾಂತಿ ಕಾಪಾಡಲು ಸಾಧ್ಯವಾಗದ ಜನರಿಗೆ ಜನಪ್ರತಿನಿಧಿ ಅಗತ್ಯವಿಲ್ಲ ಎಂದ ಹೈಕೋರ್ಟ್
"ಜನರಿಗೆ ಸೌಹಾರ್ದತೆಯಿಂದ ಬಾಳಲು ಸಾಧ್ಯವಿಲ್ಲವೆಂದಾದರೆ ನಾವು ಚುನಾವಣೆಯನ್ನು ರದ್ದುಗೊಳಿಸುತ್ತೇವೆ"
ಕೊಲ್ಕತ್ತಾ ಹೈಕೋರ್ಟ್
ಕೊಲ್ಕತ್ತಾ: ಆರು ಗಂಟೆ ಅವಧಿಯ ಆಚರಣೆ ವೇಳೆ ಶಾಂತಿ ಕಾಪಾಡಲು ಸಾಧ್ಯವಾಗದ ಜನರಿಗೆ ಜನಪ್ರತಿನಿಧಿ ಅಗತ್ಯವಿಲ್ಲ ಎಂದು ಕೊಲ್ಕತ್ತಾ ಹೈಕೋರ್ಟ್ ಹೇಳಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಎಪ್ರಿಲ್ 17ರಂದು ರಾಮನವಮಿ ಆಚರಣೆ ವೇಳೆ ನಡೆದ ಸಂಘರ್ಷದ ಕುರಿತಂತೆ ಹೈಕೋರ್ಟ್ ಮೇಲಿನಂತೆ ಹೇಳಿದೆ. ಈ ಹಿಂಸಾತ್ಮಕ ಘಟನೆಯಲ್ಲಿ ಕನಿಷ್ಠ 19 ಜನರು ಗಾಯಗೊಂಡಿದ್ದರು.
“ಜನರಿಗೆ ಶಾಂತಿ ಸೌಹಾರ್ದತೆಯಿಂದ ಬಾಳಲು ಸಾಧ್ಯವಿಲ್ಲವೆಂದಾದರೆ ನಾವು ಚುನಾವಣೆಯನ್ನು ರದ್ದುಗೊಳಿಸುತ್ತೇವೆ. ಮಾದರಿ ನೀತಿ ಸಂಹಿತೆ ಜಾರಿಯಿರುವಾಗಲೂ ಎರಡು ಪಂಗಡಗಳ ಜನರು ಈ ರೀತಿ ಜಗಳವಾಡಿದರೆ ಅವರಿಗೆ ಜನಪ್ರತಿನಿಧಿಯ ಅಗತ್ಯವಿಲ್ಲ,” ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ಮುರ್ಷಿದಾಬಾದ್ನ ಬೆಲ್ಡಂಗಾ ಮತ್ತು ಶಕ್ತಿಪುರ್ ಎಂಬಲ್ಲಿ ನಡೆದ ಹಿಂಸಾಚಾರ ಪ್ರಕರಣದ ಎನ್ಐಎ ಮತ್ತು ಸಿಬಿಐ ತನಿಖೆಗೆ ಕೋರಿ ಮುಸ್ಲಿಂ ರಾಷ್ಟ್ರೀಯ ಮಂಚ್ ಸಲ್ಲಿಸಿದ ಅರ್ಜಿಯ ಸಹಿತ ಎರಡು ಅರ್ಜಿಗಳ ವಿಚಾರಣೆ ಸಂದರ್ಭ ನ್ಯಾಯಾಲಯ ಹೇಳಿದೆ.
ರಾಮ ನವಮಿ ಮೆರವಣಿಗೆ ಸ್ಥಳೀಯ ಮಸೀದಿ ಪಕ್ಕ ಹಾದು ಹೋದ ನಂತರ ಶಕ್ತಿಪುರ್ನಲ್ಲಿ ಹಿಂಸಾತ್ಮಕ ಘಟನೆಗಳು ಉಂಟಾಗಿದ್ದವು. ರಾಮ ನವಮಿ ದಿನ ಕೊಲ್ಕತ್ತಾದಲ್ಲಿ ಸುಮಾರು 33 ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆದಿರುವಾಗ ಇಲ್ಲೇಕೆ ಹಿಂಸೆ ನಡೆದಿದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಎಪ್ರಿಲ್ 26ರಂದು ನಡೆಯುವ ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಶಿವಜ್ಞಾನಂ ಅವರು ಅಡ್ವಕೇಟ್ ಜನರಲ್ ಅವರಿಗೆ ಸೂಚಿಸಿದರು. ಯಾರು ಹಿಂಸೆಗೆ ಕಾರಣರು, ಅವರು ಹೊರಗಿನವರೇ ಎಂಬ ಪ್ರಶ್ನೆಗಳನ್ನೂ ಮುಖ್ಯ ನ್ಯಾಯಮೂರ್ತಿಗಳು ಕೇಳಿದರು.