2026ರ ವೇಳೆಗೆ ಭಾರತದ ಜಿಡಿಪಿಗೆ ಶೇ. 20ರಷ್ಟು ಕೊಡುಗೆ ನೀಡಲಿರುವ ಡಿಜಿಟಲ್ ಆರ್ಥಿಕತೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ರಾಜೀವ್ ಚಂದ್ರಶೇಖರ್ | Photo: PTI
ಗಾಂಧಿನಗರ: 2026ರ ವೇಳೆಗೆ ಭಾರತದ ಜಿಡಿಪಿಗೆ ಡಿಜಿಟಲ್ ಆರ್ಥಿಕತೆಯು ಶೇ. 20ರಷ್ಟು ಕೊಡುಗೆ ನೀಡಲಿದೆ ಎಂದು ಗುರುವಾರ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗುಜರಾತ್ ರಾಜಧಾನಿ ಗಾಂಧಿನಗರದ ಹೆಲಿಪ್ಯಾಡ್ ಮೈದಾನದಲ್ಲಿ ಗುಜರಾತ್ ಸರ್ಕಾರವು ಆಯೋಜಿಸಿದ್ದ ‘ನವೋದ್ಯಮ ಸಮ್ಮೇಳನ 2023’ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ, ಕೌಶಲಾಭಿವೃದ್ಧಿ ಹಾಗೂ ಉದ್ಯಮಶೀಲತೆ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡುತ್ತಿದ್ದರು.
“2014ರಲ್ಲಿ ಭಾರತದ ಡಿಜಿಟಲ್ ಆರ್ಥಿಕತೆಯು ಜಿಡಿಪಿಯ ಶೇ. 4.5ರಷ್ಟಿತ್ತು ಹಾಗೂ ಇಂದು ಶೇ. 11ರಷ್ಟಿದೆ. 2026ರ ವೇಳೆಗೆ ಡಿಜಿಟಲ್ ಆರ್ಥಿಕತೆಯ ಪ್ರಮಾಣವು ಜಿಡಿಪಿಯ ಶೇ. 20ರಷ್ಟು ತಲುಪಲಿದ್ದು, ಭಾರತದ ಜಿಡಿಪಿಯ ಐದನೆಯ ಒಂದು ಭಾಗದಷ್ಟಾಗಲಿದೆ” ಎಂದು ಅವರು ತಿಳಿಸಿದರು.
ಚಂದ್ರಶೇಖರ್ ಪ್ರಕಾರ, 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ‘ಡಿಜಿಟಲ್ ಇಂಡಿಯಾ’ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ ನಂತರ ನಮ್ಮ ಆರ್ಥಿಕತೆಯ ಗುಣಮಟ್ಟ ಹಾಗೂ ಪ್ರಮಾಣ, ನಮ್ಮ ಆವಿಷ್ಕಾರಕ ಪರಿಸರ ಹಾಗೂ ಜಗತ್ತಿನಲ್ಲಿ ಒಂದು ರಾಷ್ಟ್ರವಾಗಿ ನಮ್ಮ ಸ್ಥಾನವು ರೂಪಾಂತರಗೊಂಡಿದೆ ಎಂದು ಪ್ರತಿಪಾದಿಸಿದರು.
ಇಡೀ ವಿಶ್ವದಲ್ಲೇ ಅತ್ಯಂತ ವೇಗವಾಗಿ ವೃದ್ಧಿಯಾಗುತ್ತಿರುವ ಡಿಜಿಟಲ್ ಆರ್ಥಿಕತೆ ಭಾರತದ್ದು ಎಂದು ಅವರು ಅಭಿಪ್ರಾಯ ಪಟ್ಟರು.
ನವೋದ್ಯಮ ಆವಿಷ್ಕಾರಿಗಳು ಹಾಗೂ ಹೂಡಿಕೆದಾರರು ತಮ್ಮ ಯೋಜನೆಗಳು ಹಾಗೂ ಅವಕಾಶಗಳನ್ನು ಸಾಮಾನ್ಯ ವೇದಿಕೆಯೊಂದರಲ್ಲಿ ಪರಸ್ಪರ ಹಂಚಿಕೊಳ್ಳಲು ಗುಜರಾತ್ ಶಿಕ್ಷಣ ಇಲಾಖೆಯು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗುಜರಾತ್ ರಾಜ್ಯದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಋಷಿಕೇಶ್ ಪಟೇಲ್, ಸಹಭಾಗಿತ್ವ, ಸೃಜನಶೀಲತೆ ಹಾಗೂ ನವೋದ್ಯಮ ಪರಿಸರವನ್ನು ಉತ್ತೇಜಿಸಲು ವಿವಿಧ ಅವಧಿಗಳು, ಮುಖ್ಯ ತರಗತಿಗಳು ಹಾಗೂ ಅವಕಾಶಗಳ ಜಾಲವನ್ನು ಈ ಕಾರ್ಯಕ್ರಮ ಹೊಂದಿರಲಿದೆ ಎಂದು ಹೇಳಿದರು.