ಮತಎಣಿಕೆ ವೇಳೆ ಶೇ. 100 ವಿವಿಪ್ಯಾಟ್ ಪರಿಶೀಲನೆಗೆ ಮಾಜಿ ಚುನಾವಣಾ ಆಯುಕ್ತ ಎಸ್.ವೈ. ಕುರೇಷಿ ಕರೆ
VVPA̧T, Photo: scroll.in
ಹೊಸದಿಲ್ಲಿ: ಮತ ಎಣಿಕೆ ಪ್ರಕ್ರಿಯೆಯ ಭಾಗವಾಗಿ ಶೇ.100ರಷ್ಟು ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೇಲ್ (ವಿವಿಪ್ಯಾಟ್) ಚೀಟಿಗಳನ್ನು ಪರಿಶೀಲಿಸಬೇಕು ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಕುರೇಷಿ ಅವರು ಶುಕ್ರವಾರ ಹೇಳಿದ್ದಾರೆ.
2024ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವಾಗ ಕುರೇಶಿ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಈ ಕರೆಯನ್ನು ನೀಡಿದ್ದಾರೆ.
ವಿವಿಪ್ಯಾಟ್ ವಿದ್ಯುನ್ಮಾನ ಮತದಾನ ಯಂತ್ರಗಳಿಗೆ ಸ್ವತಂತ್ರ ಪರಿಶೀಲನಾ ವ್ಯವಸ್ಥೆಯಾಗಿದೆ. ಈ ಪ್ರಕ್ರಿಯೆಯು ತಮ್ಮ ಮತಗಳು ಸರಿಯಾಗಿ ಬಿದ್ದಿವೆಯೇ ಎನ್ನುವುದನ್ನು ಪರಿಶೀಲಿಸಲು ಮತದಾರರಿಗೆ ಅವಕಾಶವನ್ನು ನೀಡುತ್ತದೆ.
ಪ್ರಸ್ತುತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯ ಯಾದ್ರಚ್ಛಿಕವಾಗಿ ಆಯ್ದ ಐದು ಮತಗಟ್ಟೆಗಳ ವಿವಿಪ್ಯಾಟ್ ಚೀಟಿಗಳ ಪರಿಶೀಲನೆಯನ್ನು ಮಾತ್ರ ನಡೆಸಲಾಗುತ್ತಿದೆ. ಇವಿಎಮ್ ಗಳಲ್ಲಿ ದಾಖಲಾದ ಮತಗಳ ಎಣಿಕೆಯ ಅಂತಿಮ ಸುತ್ತಿನ ಬಳಿಕ ಇದನ್ನು ಮಾಡಲಾಗುತ್ತದೆ.
ವಿವಿಪ್ಯಾಟ್ ಚೀಟಿಗಳ ಎಣಿಕೆ ಒಂದು ದಿನಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ, ಆದರೆ ಇದು ಜನರಲ್ಲಿ ವಿಶ್ವಾಸವನ್ನು ಮರುಸ್ಥಾಪಿಸುತ್ತದೆ. ಇದು ವಿಶ್ವಾಸಾರ್ಹ ಚುನಾವಣೆಗೆ ಅಗತ್ಯವಾಗಿದೆ ಎಂದು ಕುರೇಶಿ ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ಮತದಾರರು ಮತದಾನದ ಸಮಯದಲ್ಲಿ ತಮ್ಮ ವಿವಿಪ್ಯಾಟ್ ಚೀಟಿಗಳನ್ನು ಪರಿಶೀಲಿಸಿದ ಬಳಿಕ ಅವುಗಳನ್ನು ಮತಪೆಟ್ಟಿಗೆಗಳಲ್ಲಿ ಹಾಕುವುದು ಮತ್ತು ಬಳಿಕ ಇವಿಎಮ್ ಗಳ ಮತ ಎಣಿಕೆಯೊಂದಿಗೆ ತಾಳೆ ನೋಡಲು ಈ ಚೀಟಿಗಳನ್ನು ಎಣಿಸುವುದು ಕಾರ್ಯಸಾಧ್ಯವೇ ಎಂಬ ಸಾಮಾಜಿಕ ಬಳಕೆದಾರರೋರ್ವರ ಪ್ರಶ್ನೆಗೆ ಕುರೇಷಿ ಎಕ್ಸ್ ನಲ್ಲಿ ಈ ಉತ್ತರವನ್ನು ನೀಡಿದ್ದಾರೆ.
ಡಿ.19ರಂದು ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ ಶೇ.100ರಷ್ಟು ವಿವಿಪ್ಯಾಟ್ ಚೀಟಿಗಳ ಎಣಿಕೆಯನ್ನು ಕೋರುವ ನಿರ್ಣಯವೊಂದನ್ನು ಅಂಗೀಕರಿಸಿತ್ತು.
ಮೇ 2019ರಲ್ಲಿ ಸರ್ವೋಚ್ಚ ನ್ಯಾಯಲಯವು ಶೇ.100ರಷ್ಟು ವಿವಿಪ್ಯಾಟ್ ಚೀಟಿಗಳ ಎಣಿಕೆಯನ್ನು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿತ್ತು