ಜೂ.4ರ ಶೇರು ಮಾರುಕಟ್ಟೆ ಕುಸಿತ ವರದಿ ಸಲ್ಲಿಕೆಗೆ ಕೇಂದ್ರ, ಸೆಬಿಗೆ ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ
PC: PTI
ಹೊಸದಿಲ್ಲಿ: ಚುನಾವಣಾ ಫಲಿತಾಂಶದ ದಿನವಾಗಿದ್ದ ಜೂ.4ರಂದು ಹೂಡಿಕೆದಾರರಿಗೆ ಬಿಲಿಯಗಟ್ಟಲೆ ರೂ.ನಷ್ಟಕ್ಕೆ ಕಾರಣವಾಗಿದ್ದ ಶೇರು ಮಾರುಕಟ್ಟೆ ಕುಸಿತದ ಕುರಿತು ವಿವರವಾದ ವರದಿಗಳನ್ನು ಸಲ್ಲಿಸಲು ಕೇಂದ್ರ ಮತ್ತು ಸೆಬಿಗೆ ನಿರ್ದೇಶನ ಕೋರಿ ಅರ್ಜಿಯೊಂದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.
ಅದಾನಿ-ಹಿಂಡೆನ್ಬರ್ಗ್ ವಿಷಯದಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ ನ್ಯಾ.ಎ.ಎಂ.ಸಪ್ರೆ ನೇತೃತ್ವದ ತಜ್ಞರ ಸಮಿತಿಯ ಸಲಹೆಗಳ ಪರಿಗಣನೆಗಾಗಿ ಜ.3ರಂದು ಹೊರಡಿಸಿದ್ದ ಆದೇಶದ ಸ್ಥಿತಿಗತಿ ವರದಿಯನ್ನು ಸಲ್ಲಿಸಲು ಕೇಂದ್ರ ಸರಕಾರ ಮತ್ತು ಸೆಬಿಗೆ ನಿರ್ದೇಶನವನ್ನೂ ನ್ಯಾಯವಾದಿ ವಿಶಾಲ ತಿವಾರಿ ಅವರ ಅರ್ಜಿಯಲ್ಲಿ ಕೋರಲಾಗಿದೆ.
ತಜ್ಞರ ಸಮಿತಿಯ ಸಲಹೆಗಳನ್ನು ಕೇಂದ್ರ ಮತ್ತು ಸೆಬಿ ರಚನಾತ್ಮಕವಾಗಿ ಪರಿಗಣಿಸಬೇಕು ಹಾಗೂ ನಿಯಂತ್ರಣ ವ್ಯವಸ್ಥೆಯನ್ನು ಬಲಗೊಳಿಸಲು, ಹೂಡಿಕೆದಾರರನ್ನು ರಕ್ಷಿಸಲು ಮತ್ತು ಸೆಕ್ಯೂರಿಟಿಗಳ ಮಾರುಕಟ್ಟೆಯ ಕ್ರಮಬದ್ಧ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಯಾವುದೇ ಮುಂದಿನ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ತನ್ನ ಜ.3ರ ಆದೇಶದಲ್ಲಿ ಸೂಚಿಸಿತ್ತು.
ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡ ಬಳಿಕ ಶೇರು ಮಾರುಕಟ್ಟೆಯು ಗಗನಕ್ಕೆ ಏರಿತ್ತು,ಆದರೆ ವಾಸ್ತವ ಫಲಿತಾಂಶಗಳು ಪ್ರಕಟಗೊಂಡಾಗ ಮಾರುಕಟ್ಟೆಯು ಭಾರೀ ಕುಸಿತವನ್ನು ದಾಖಲಿಸಿತ್ತು. ಮಾಧ್ಯಮ ವರದಿಗಳ ಪ್ರಕಾರ ಹೂಡಿಕೆದಾರರಿಗೆ 20 ಲ.ಕೋ.ರೂ.ಗಳ ನಷ್ಟವುಂಟಾಗಿದೆ. ಇದು ನಿಯಂತ್ರಣ ವ್ಯವಸ್ಥೆಯ ಕುರಿತು ಮತ್ತೆ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ನ್ಯಾಯಾಲಯ ಆದೇಶ ನೀಡಿದ್ದರೂ ಯಾವುದೂ ಬದಲಾಗಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಜೂನ್ 1ರಂದು,ಶನಿವಾರ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿಗೆ ಭಾರೀ ಗೆಲುವನ್ನು ಬಿಂಬಿಸಿದ ಬಳಿಕ ಜೂ.3ರಂದು,ಸೋಮವಾರ ಬಾಂಬೆ ಶೇರು ವಿನಿಮಯ ಕೇಂದ್ರದ ಸೂಚ್ಯಂಕ ಸೆನ್ಸೆಕ್ಸ್2,507 ಅಂಕಗಳ ಬೃಹತ್ ಜಿಗಿತವನ್ನು ದಾಖಲಿಸುವ ಮೂಲಕ 76,469ರ ಹೊಸ ಎತ್ತರಕ್ಕೇರಿತ್ತು. ಆದರೆ ಮರುದಿನ ಶೇರು ಮಾರುಕಟ್ಟೆಗಳಲ್ಲಿ ರಕ್ತಪಾತವೇ ಸಂಭವಿಸಿತ್ತು,ಸೆನ್ಸೆಕ್ಸ್ 4,390 ಅಂಕಗಳಷ್ಟು ಪತನಗೊಂಡು 72,079ಕ್ಕೆ ಕುಸಿದಿತ್ತು. ಇದು ನಾಲ್ಕು ವರ್ಷಗಳಲ್ಲಿ ಒಂದೇ ದಿನ ದಾಖಲಾಗಿದ್ದ ಅತ್ಯಂತ ಕೆಟ್ಟ ಕುಸಿತವಾಗಿತ್ತು.