ಯಾಸಿನ್ ಮಲಿಕ್ ಗೆ ಮರಣದಂಡನೆ ಕೋರಿ ಅರ್ಜಿ | ವಿಚಾರಣೆಯಿಂದ ಹಿಂದೆ ಸರಿದ ದಿಲ್ಲಿ ಹೈಕೋರ್ಟ್ ನ್ಯಾಯಾಧೀಶ

ಯಾಸಿನ್ ಮಲಿಕ್ | PC : ANI
ಹೊಸದಿಲ್ಲಿ: ಭಯೋತ್ಪಾದನೆಗೆ ಹಣಕಾಸಿನ ನೆರವು ನೀಡಿದ ಪ್ರಕರಣದಲ್ಲಿ ಪತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್ ಗೆ ಮರಣ ದಂಡನೆ ನೀಡುವಂತೆ ಕೋರಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸಲ್ಲಿಸಿದ ಅರ್ಜಿಯ ವಿಚಾರಣೆಯಿಂದ ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಮೂರ್ತಿ ಅಮಿತ್ ಶರ್ಮಾ ಗುರುವಾರ ಹಿಂದೆ ಸರಿದಿದ್ದಾರೆ.
ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿತ್ತು. ಅಮಿತ್ ಶರ್ಮಾ ಹಿಂದೆ ಸರಿದ ಬಳಿಕ ಈ ಪ್ರಕರಣವನ್ನು ಇನ್ನೊಂದು ಪೀಠಕ್ಕೆ ವರ್ಗಾಯಿಸಲಾಗಿದೆ.
‘‘ನ್ಯಾಯಮೂರ್ತಿ ಶರ್ಮಾ ಅವರು ಸದಸ್ಯರಲ್ಲದ ಇನ್ನೊಂದು ಪೀಠ ಆಗಸ್ಟ್ 9ರಂದು ಈ ಪ್ರಕರಣದ ವಿಚಾರಣೆ ನಡೆಸಲಿದೆ’’ ಎಂದು ನ್ಯಾಯಮೂರ್ತಿ ಸಿಂಗ್ ತಿಳಿಸಿದರು.
ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಜಮ್ಮು ಹಾಗೂ ಕಾಶ್ಮೀರ ಲಿಬರೇಶನ್ ಫ್ರಂಟ ನ ಮುಖ್ಯಸ್ಥ ಯಾಸಿನ್ ಮಲಿಕ್ ಇಲ್ಲಿನ ತಿಹಾರ್ ಕಾರಾಗೃಹದಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಯಲ್ಲಿ ಹಾಜರಾದರು.
ಮುಂದಿನ ವಿಚಾರಣೆಯಲ್ಲಿ ಕೂಡ ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ನ್ಯಾಯಾಲಯ ಯಾಸಿನ್ ಮಲಿಕ್ ಗೆ ನಿರ್ದೇಶಿಸಿತು.
ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಯಾಸಿನ್ ಮಲಿಕ್ಗೆ ಮರಣ ದಂಡನೆ ನೀಡುವಂತೆ ಕೋರಿ ಎನ್ಐಎ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ಕಳೆದ ವರ್ಷ ಮೇ 29ರಂದು ಯಾಸಿನ್ ಮಲಿಕ್ ಗೆ ನೋಟಿಸು ನೀಡಿತ್ತು. ಅಲ್ಲದೆ, ಮುಂದಿನ ವಿಚಾರಣೆಯ ದಿನಾಂಕದಂದು ಖುದ್ದಾಗಿ ಹಾಜರಿರುವಂತೆ ಸೂಚಿಸಿತ್ತು.
ಅನಂತರ, ಕಾರಾಗೃಹ ಆಡಳಿತ ಮಂಡಳಿ ಯಾಸಿನ್ ಮಲಿಕ್ ಅತಿ ಅಪಾಯಕಾರಿ ಕೈದಿಯಾಗಿರುವುದರಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅನುಮತಿ ಕೋರಿ ಹಾಗೂ ಸಾರ್ವಜನಿಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಅವರನ್ನು ಭೌತಿಕವಾಗಿ ಹಾಜರುಪಡಿಸದೇ ಇರುವುದು ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.
ಈ ಮನವಿಯನ್ನು ಉಚ್ಚ ನ್ಯಾಯಾಲಯ ಪುರಸ್ಕರಿಸಿತ್ತು.