ವಿವಿ ಪ್ಯಾಟ್ನೊಂದಿಗೆ ಇವಿಎಂ ಮತ ಎಣಿಕೆಯ ತಾಳೆಯನ್ನು ಕೋರಿರುವ ಅರ್ಜಿ: ವಿಚಾರಣೆಗೆ ಸುಪ್ರೀಂ ಅಸ್ತು
ಚುನಾವಣಾ ಆಯೋಗ | Photo : PTI
ಹೊಸದಿಲ್ಲಿ: ವಿದ್ಯುನ್ಮಾನ ಮತ ಯಂತ್ರ (EVM)ಗಳಲ್ಲಿಯ ಮತಗಳನ್ನು ವೋಟರ್ ವೆರಿಫೈಯೇಬಲ್ ಪೇಪರ್ ಆಡಿಟ್ ಟ್ರೇಲ್ (ವಿವಿಪ್ಯಾಟ್) ಯಂತ್ರಗಳಲ್ಲಿ ‘ಚಲಾವಣೆಯಾಗಿದೆ ’ಎಂದು ಪ್ರತ್ಯೇಕವಾಗಿ ದಾಖಲಾದ ಮತಗಳೊಂದಿಗೆ ತಾಳೆ ಹಾಕಲು ನಿರ್ದೇಶನ ಕೋರಿ ಸಲ್ಲಿಸಿರುವ ಅರ್ಜಿಯ ಪ್ರತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಅರ್ಜಿದಾರ ಎನ್ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR)ಗೆ ಸೂಚಿಸಿದೆ.
ಮೂರು ವಾರಗಳ ಬಳಿಕ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲು ನ್ಯಾ.ಸಂಜೀವ ಖನ್ನಾ ನೇತೃತ್ವದ ಪೀಠವು ಒಪ್ಪಿಕೊಂಡಿತಾದರೂ ಅರ್ಜಿದಾರರು ಅತಿಯಾದ ಅನುಮಾನವನ್ನು ಹೊಂದಿರಬಹುದು ಎಂದು ಮೌಖಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
2013ರಲ್ಲಿ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಭಾರತೀಯ ಚುನಾವಣಾ ಆಯೋಗ ಪ್ರಕರಣದಲ್ಲಿಯ ತನ್ನ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಚುನಾವಣಾ ಪ್ರಕ್ರಿಯೆಯು ‘ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆಯನ್ನು ಹೊಂದಿರಬೇಕು ಮತ್ತು ಮತದಾರರ ವಿಶ್ವಾಸವನ್ನು ಮರುಸ್ಥಾಪಿಸಬೇಕು ’ ಎಂದು ನಿರ್ದೇಶನ ನೀಡಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಮತದಾರನ ಮತ ಚಲಾವಣೆಯ ಮುದ್ರಿತ ಪ್ರತಿಯು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಅನಿವಾರ್ಯ ಅಗತ್ಯವಾಗಿದೆ ಎಂದು ಹೇಳಿದ್ದ ಸರ್ವೋಚ್ಚ ನ್ಯಾಯಾಲಯವು,ಇವಿಎಮ್ ಗಳಲ್ಲಿ ವಿವಿಪ್ಯಾಟ್ ಗಳನ್ನು ಪರಿಚಯಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತ್ತು.
ಮತದಾರರಿಗೆ ತಮ್ಮ ಮತ ಚಲಾವಣೆಯ ತೃಪ್ತಿ ಮತ್ತು ಅದನ್ನು ಪರಿಶೀಲಿಸುವ ಹಕ್ಕು ಚುನಾವಣಾ ಪ್ರಜಾಪ್ರಭುತ್ವದ ಕೇಂದ್ರಬಿಂದುವಾಗಿದೆ. ಇದು ಕೇವಲ ಚುನಾವಣಾ ಆಯೋಗ,ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳಿಗೆ ಸೀಮಿತವಲ್ಲ. ಪ್ರತಿಯೊಬ್ಬ ಮತದಾರನಿಗೂ ತಾನು ಚಲಾಯಿಸಿದ ಮತ ತಾನು ಬಯಸಿದ ಅಭ್ಯರ್ಥಿಗೇ ಬಿದ್ದಿದೆ ಮತ್ತು ತನ್ನ ಮತವನ್ನು ದಾಖಲಾಗಿರುವಂತೆ ಎಣಿಕೆ ಮಾಡಲಾಗಿದೆ ಎಂದು ದೃಢಪಡಿಸಿಕೊಳ್ಳಲು ಸಾಧ್ಯವಾಗಬೇಕು ಎನ್ನುವುದು ವೋಟರ್ ವೆರಿಫೈಯೇಬಲ್’ ನ ಅರ್ಥವಾಗಿದೆ.
ವಿವಿಪ್ಯಾಟ್ ಏಳು ಸೆಕೆಂಡ್ ಗಳ ಕಾಲ ಪ್ರದರ್ಶಿಸುವ ಸ್ಲಿಪ್ ಮೂಲಕ ತನ್ನ ಮತ ತಾನು ಬಯಸಿದ ಅಭ್ಯರ್ಥಿಗೆ ಬಿದ್ದಿದೆ ಎನ್ನುವುದನ್ನು ಮತದಾರ ದೃಢಪಡಿಸಿಕೊಳ್ಳಬಹುದು, ಆದರೆ ಮತದಾರ ತಾನು ದಾಖಲಿಸಿರುವಂತೆ ಮತ ಎಣಿಕೆಯಾಗಿದೆ ಎನ್ನುವುದನ್ನು ಪರಿಶೀಲಿಸಲು ಯಾವುದೇ ಕಾರ್ಯವಿಧಾನವನ್ನು ಚುನಾವಣಾ ಆಯೋಗವು ಒದಗಿಸಿಲ್ಲ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.