‘ಆಯುಷ್ಮಾನ್ ಭಾರತ್’ನಲ್ಲಿ ಆಯುರ್ವೇದ, ಯೋಗ ಸೇರಿಸುವಂತೆ ಕೋರಿ ಅರ್ಜಿ: ಕೇಂದ್ರ, ದಿಲ್ಲಿ ಸರಕಾರದ ಪ್ರತಿಕ್ರಿಯೆ ಕೋರಿದ ಹೈಕೋರ್ಟ್
Photo: IANS
ಹೊಸದಿಲ್ಲಿ: ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆ ‘ಆಯುಷ್ಮಾನ್ ಭಾರತ್’ನಲ್ಲಿ ಆಯುರ್ವೇದ, ಯೋಗ ಹಾಗೂ ನ್ಯಾಚುರೋಪತಿಯನ್ನು ಸೇರಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಕುರಿತಂತೆ ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ಕೇಂದ್ರ ಹಾಗೂ ದಿಲ್ಲಿ ಸರಕಾರಗಳ ಪ್ರತಿಕ್ರಿಯೆ ಕೋರಿದೆ.
ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ನ್ಯಾಯಮೂರ್ತಿ ತುಷಾರ್ ರಾವ್ ಗೆಡೇಲಾ ಅವರನ್ನು ಒಳಗೊಂಡ ಪೀಠ ದಿಲ್ಲಿ ಸರಕಾರವಲ್ಲದೆ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ, ಆಯುಷ್, ಹಣಕಾಸು ಹಾಗೂ ಗೃಹ ವ್ಯವಹಾರಗಳ ಕೇಂದ್ರ ಸಚಿವಾಲಯಗಳಿಗೆ ನೋಟಿಸು ಜಾರಿ ಮಾಡಿದೆ ಹಾಗೂ ತಮ್ಮ ಪ್ರತಿ ಅಫಿಡಾವಿಟ್ ಅನ್ನು 8 ವಾರಗಳ ಒಳಗೆ ಸಲ್ಲಿಸುವಂತೆ ಸೂಚಿಸಿದೆ.
ಪೀಠ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 29ಕ್ಕೆ ಪಟ್ಟಿ ಮಾಡಿದೆ.
ನಾಗರಿಕರ ಆರೋಗ್ಯ ಹಕ್ಕನ್ನು ಸಂರಕ್ಷಿಸುವ ಆಯುಷ್ಮಾನ್ ಭಾರತ್ ಎಂದು ಕೂಡ ಕರೆಯಲಾಗುವ ರಾಷ್ಟ್ರೀಯ ಆರೋಗ್ಯ ರಕ್ಷಣೆ ಮಿಷನ್, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ)ಯಲ್ಲಿ ಆಯುರ್ವೇದ, ಯೋಗ ಹಾಗೂ ನ್ಯಾಚುರೋಪತಿಯನ್ನು ಸೇರಿಸುವಂತೆ ಕೋರಿ ಈ ಅರ್ಜಿ ಸಲ್ಲಿಸಲಾಗಿದೆ.
2018ರಲ್ಲಿ ಆರಂಭಿಸಲಾಗಿರುವ ಆಯುಷ್ಮಾನ್ ಭಾರತ್ ಎರಡು ಮುಖ್ಯ ಅಂಶಗಳನ್ನು ಹೊಂದಿದೆ. ಒಂದು ಪಿಎಂ-ಜೆವೈ. ಇನ್ನೊಂದು ಆರೋಗ್ಯ ಹಾಗೂ ಕ್ಷೇಮ ಕೇಂದ್ರ.
ಆರ್ಥಿಕ ದುರ್ಬಲ ವರ್ಗ (ಇಡಬ್ಲ್ಯುಎಸ್) ಹಾಗೂ ಬಡತನ ರೇಖೆಗಿಂತ ಕೆಳಗೆ (ಬಿಪಿಎಲ್) ಇರುವವರಿಗೆ ಸಾರ್ವತ್ರಿಕ ಆರೋಗ್ಯ ರಕ್ಷಣೆ (ಯುಎಚ್ಸಿ)ಯನ್ನು ಸಾಧಿಸುವ ಕ್ರಮವಾಗಿ ರಾಷ್ಟ್ರೀಯ ಆರೋಗ್ಯ ನೀತಿ -2017ರ ರೀತಿಯಂತೆ ‘ಆಯುಷ್ಮಾನ್ ಭಾರತ್’ ಅನ್ನು ಆರಂಭಿಸಲಾಗಿದೆ. ಆದರೆ, ಇದು ಭಾರತೀಯ ವೈದ್ಯ ಪದ್ಧತಿಯಾದ ಆಯುರ್ವೇದ, ಯೋಗ, ನ್ಯಾಚುರೋಪತಿಯನ್ನು ಒಳಗೊಂಡಿಲ್ಲ ಎಂದು ದೂರುದಾರ, ನ್ಯಾಯವಾದಿ ಅಶ್ವಿನಿ ಕುಮಾರ್ ಉಪಾಧ್ಯಾಯ ಹೇಳಿದ್ದಾರೆ.