ಗ್ರಹಾಂ ಸ್ಟೈನ್ಸ್ ಹತ್ಯೆ ಪ್ರಕರಣದ ಆರೋಪಿಯ ಬಿಡುಗಡೆ ಕೋರಿ ಅರ್ಜಿ | ಒಡಿಶಾ ಸರಕಾರದ ಪ್ರತಿಕ್ರಿಯೆ ಕೋರಿದ ಸುಪ್ರೀಂ
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ : ಒಡಿಶಾದ ಕಿಯೋಂಜಾರ್ನಲ್ಲಿ 1999ರಲ್ಲಿ ಆಸ್ಟ್ರೇಲಿಯಾದ ಮಿಷನರಿ ಗ್ರಹಾಂ ಸ್ಟೈನ್ಸ್ ಹಾಗೂ ಅವರ ಇಬ್ಬರು ಪುತ್ರರನ್ನು ಹತ್ಯೆಗೈದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ರವೀಂದ್ರ ಪಾಲ್ ಆಲಿಯಾಸ್ ದಾರಾ ಸಿಂಗ್ ಬಿಡುಗಡೆ ಕೋರಿ ಸಲ್ಲಿಸಿದ ಅರ್ಜಿ ಕುರಿತಂತೆ ಸುಪ್ರೀಂ ಕೋರ್ಟ್ ಮಂಗಳವಾರ ಒಡಿಸಾ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.
ಈ ಅರ್ಜಿ ಕುರಿತು ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಮೂವರು ಸದಸ್ಯರ ಪೀಠ ರಾಜ್ಯ ಸರಕಾರಕ್ಕೆ ಸೂಚಿಸಿದೆ. ಈ ಪೀಠ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿಪಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನು ಕೂಡ ಒಳಗೊಂಡಿದೆ.
ಸಿಂಗ್ನ ಇದೇ ರೀತಿಯ ಅರ್ಜಿ ಕುರಿತಂತೆ ನ್ಯಾಯಾಲಯದ ಇನ್ನೊಂದು ಪೀಠ ಕೂಡ ರಾಜ್ಯ ಸರಕಾರಕ್ಕೆ ಜುಲೈ 9ರಂದು ನೋಟಿಸು ನೀಡಿತ್ತು.
ಹೊಸ ಅರ್ಜಿಯಲ್ಲಿ ದಾರಾ ಸಿಂಗ್ ಜೈಲಿನಿಂದ ಬಿಡುಗಡೆಗೊಳಿಸುವಾಗ ಹೆಚ್ಚು ಉದಾರ ನೀತಿ ಅನುಸರಿಸಬೇಕು ಎಂದು ಮನವಿ ಮಾಡಿದ್ದಾನೆ. ಸಿಂಗ್ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದ ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಸಿಂಗ್ ಈಗಾಗಲೇ 24 ವರ್ಷ 6 ತಿಂಗಳು ಕಾರಾಗೃಹದಲ್ಲಿ ಕಳೆದಿದ್ದಾನೆ ಎಂದು ಹೇಳಿದ್ದಾರೆ.