ವೈದ್ಯಕೀಯ ಸ್ನಾತಕೋತ್ತರ ಪ್ರವೇಶಕ್ಕೆ ಆನ್ಲೈನ್ ಕೌನ್ಸೆಲಿಂಗ್ ಕಡ್ಡಾಯ: ಎನ್ಎಂಸಿ
ಹೊಸದಿಲ್ಲಿ: ಸ್ನಾತಕೋತ್ತರ ಪದವಿ ವೈದ್ಯಕೀಯ ಕೋರ್ಸ್ ಪ್ರವೇಶವನ್ನು ಈಗ ಕೌನ್ಸೆಲಿಂಗ್ ಮೂಲಕ ಮಾತ್ರವೇ ಮಾಡಬೇಕು. ಪ್ರತಿ ಕೋರ್ಸ್ ನ ಶುಲ್ಕವನ್ನು ಕಾಲೇಜುಗಳು ಮುಂಚಿತವಾಗಿ ಪ್ರಕಟಿಸಬೇಕು. ಯಾವುದೇ ಕಾಲೇಜುಗಳು ವಿದ್ಯಾರ್ಥಿಗಳನ್ನು ನೇರವಾಗಿ ದಾಖಲಿಸಿಕೊಳ್ಳುವಂತಿಲ್ಲ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಹೇಳಿದೆ.
ವೈದ್ಯಕೀಯ ಶಿಕ್ಷಣ ನಿಯಂತ್ರಕ ಸಂಸ್ಥೆಯಾದ ರಾಷ್ಟ್ರೀಯ ವೈದ್ಯಕೀಯ ಆಯೋಗದ ಇತ್ತೀಚೆಗಿನ ಅಧಿಸೂಚನೆಯಲ್ಲಿನ ‘‘ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ನಿಯಮಮಾವಳಿಗಳು -2023’’ ಪ್ರಕಾರ ಆಯಾ ಪರೀಕ್ಷೆಯ ಅರ್ಹತೆ ಪಟ್ಟಿಯನ್ನು ಆಧರಿಸಿ ಮಾತ್ರ ಭಾರತದ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಪ್ರವೇಶಕ್ಕೆ ಸಾಮಾನ್ಯ ಕೌನ್ಸೆಲಿಂಗ್ ನಡೆಸಬೇಕು.
ಎಲ್ಲಾ ಸ್ನಾತಕೋತ್ತರ ಸೀಟುಗಳಿಗೆ ಎಲ್ಲಾ ಸುತ್ತಿನ ಸಾಮಾನ್ಯ ಕೌನ್ಸೆಲಿಂಗ್ ಅನ್ನು ಆನ್ಲೈನ್ ವಿಧಾನದಲ್ಲಿ ರಾಜ್ಯ ಅಥವಾ ಕೇಂದ್ರೀಯ ಕೌನ್ಸೆಲಿಂಗ್ ಪ್ರಾಧಿಕಾರಗಳು ನಡೆಸಲಿವೆ. ಯಾವುದೇ ವೈದ್ಯಕೀಯ ಕಾಲೇಜು ಅಥವಾ ಸಂಸ್ಥೆಗಳು ಯಾವುದೇ ವಿದ್ಯಾರ್ಥಿಯನ್ನು ತಾವಾಗಿಯೇ ದಾಖಲಿಸಿಕೊಳ್ಳುವಂತಿಲ್ಲ ಎಂದು ಅದು ಹೇಳಿದೆ.
ಸೀಟ್ ಮ್ಯಾಟ್ರಿಕ್ಸ್ ನ ವಿವರಗಳನ್ನು ನಮೂದಿಸುವಾಗ ವೈದ್ಯಕೀಯ ಕಾಲೇಜುಗಳು ಪ್ರತಿ ಕೋರ್ಸಿಗೆ ಶುಲ್ಕದ ಮೊತ್ತವನ್ನು ನಮೂದಿಸಬೇಕು. ತಪ್ಪಿದರೆ, ಸೀಟ್ ಅನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ನಿಯಮಾವಳಿಗಳಲ್ಲಿ ಹೇಳಲಾಗಿದೆ.
ವಿಶ್ವವಿದ್ಯಾನಿಲಯದ ಪರೀಕ್ಷೆಗಳಲ್ಲಿ ರಚನಾತ್ಮಕ ಮೌಲ್ಯಮಾಪನ ಹಾಗೂ ಬಹು ಆಯ್ಕೆಯ ಪ್ರಶ್ನೆಗಳು ಸೇರಿದಂತೆ ಕೆಲವು ಬದಲಾವಣೆಗಳನ್ನು ಪರಿಚಯಿಸಲಾಗಿದೆ. ಪರೀಕ್ಷೆಯಲ್ಲಿ ವಸ್ತು ನಿಷ್ಠತೆ ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟವನ್ನು ತರಲು ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಾ. ವಿಜಯ್ ಓಝಾ ತಿಳಿಸಿದ್ದಾರೆ.
ನಿಯಮಾವಳಿಯ ಮುಖ್ಯಾಂಶ
- ಡಿಆರ್ ಪಿ ಅಡಿಯಲ್ಲಿ 50 ಹಾಸಿಗೆಗಳಿಗಿಂತ ಕಡಿಮೆಯಿಲ್ಲದ ಸಾರ್ವಜನಿಕ ಆಸ್ಪತ್ರೆ ಅಥವಾ ಸರಕಾರಿ ಅನುದಾನದಿಂದ ಕಾರ್ಯ ನಿರ್ವಹಿಸುವ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರಿಗೆ ತರಬೇತಿ ನೀಡಬಹುದು.
- ತಳಮಟ್ಟದಲ್ಲಿ ಆರೋಗ್ಯ ಸೇವೆಗಳನ್ನು ಸುದೃಢಗೊಳಿಸಲು ಜಿಲ್ಲಾ ಆರೋಗ್ಯ ವ್ಯವಸ್ಥೆಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತರಬೇತು ನೀಡುವ ಗುರಿಯನ್ನು ಡಿಆರ್ ಪಿ ಹೊಂದಿದೆ.
- ವೈದ್ಯಕೀಯ ಕಾಲೇಜುಗಳು ಈಗ ಮೂರನೇ ವರ್ಷದಿಂದ ಸ್ನಾತಕೋತ್ತರ ಕೋರ್ಸ್ ಗಳನ್ನು ಆರಂಭಿಸಬಹುದು.
- ಸರಕಾರಿ ಸ್ವಾಮ್ಯದ ಹಾಗೂ ಸರಕಾರದಿಂದ ನಿರ್ವಹಣೆಯಾಗುತ್ತಿರುವ ಅಸ್ತಿತ್ವದಲ್ಲಿರುವ ಅಥವಾ ಪ್ರಸ್ತಾವಿತ ಬೋಧಕೇತರ ಆಸ್ಪತ್ರೆಗಳು ಪದವಿವೂರ್ವ ಕಾಲೇಜುಗಳು ಇಲ್ಲದೆ ಸ್ನಾತಕೋತ್ತರ ಕೋರ್ಸ್ಗಳನ್ನು ಪ್ರಾರಂಭಿಸಬಹುದು.
- ಸ್ನಾತಕೋತ್ತರ ಪದವಿ ಶಿಕ್ಷಣ ಸಂಸ್ಥೆಯು ಅಗತ್ಯದ ಮೂಲಸೌಕರ್ಯ ಹಾಗೂ ಕ್ಲಿನಿಕಲ್ ಸಾಮಗ್ರಿ- ಇತ್ಯಾದಿಗಳನ್ನು ಹೊಂದಿರಲೇಬೇಕು.
- ಎಲ್ಲಾ ವಿದ್ಯಾರ್ಥಿಗಳು ಸಂಶೋಧನಾ ವಿಧಾನ, ನೀತಿಶಾಸ್ತ್ರ ಹಾಗೂ ಹೃದ್ರೋಗ ಜೀವರಕ್ಷಕ ನೆರವು ಕೌಶಲಕ್ಕೆ ಸಂಬಂಧಿಸಿದ ಕೋರ್ಸುಗಳಲ್ಲಿ ತರಬೇತಿ ಪಡೆಯುವುದು ಕಡ್ಡಾಯವಾಗಿದೆ.