ದೈಹಿಕವಾಗಿ ದಣಿದಿದ್ದೀರಿ, ಮಾನಸಿಕವಾಗಿ ನಿವೃತ್ತರಾಗಿದ್ದೀರಿ: ಬಿಹಾರ ಸಿಎಂ ನಿತೀಶ್ ಕುಮಾರ್ ಕುರಿತು ಪ್ರಶಾಂತ್ ಕಿಶೋರ್ ವ್ಯಂಗ್ಯ

ಪ್ರಶಾಂತ್ ಕಿಶೋರ್ (Photo: PTI)
ಪಾಟ್ನಾ: “ನೀವು ದೈಹಿಕವಾಗಿ ದಣಿದಿದ್ದೀರಿ, ಮಾನಸಿಕವಾಗಿ ನಿವೃತ್ತರಾಗಿದ್ದೀರಿ” ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಚುನಾವಣಾ ತಜ್ಞ ಹಾಗೂ ಜನಸೂರಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ವ್ಯಂಗ್ಯವಾಡಿದ್ದಾರೆ. ನಿತೀಶ್ ಕುಮಾರ್ ಪದೇ ಪದೇ ಮೈತ್ರಿಕೂಟಗಳನ್ನು ಬದಲಿಸುವ ಮೂಲಕ ಅಧಿಕಾರದಲ್ಲಿ ಉಳಿದಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.
ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಯು ಬಳಿ ಕಡಿಮೆ ಸ್ಥಾನಗಳಿದ್ದರೂ, ಮೈತ್ರಿಕೂಟಗಳನ್ನು ಬದಲಿಸುವ ಮೂಲಕ ನಿತೀಶ್ ಕುಮಾರ್ ಅಧಿಕಾರದಲ್ಲಿ ಉಳಿದಿದ್ದಾರೆ. 2013ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಕಡಿದುಕೊಂಡಿದ್ದ ಅವರು, 2015ರಲ್ಲಿ ಆರ್ಜೆಡಿ ನೇತೃತ್ವದ ಮಹಾಘಟಬಂಧನ್ ಸೇರ್ಪಡೆಯಾಗಿದ್ದರು. ತರುವಾಯ, 2017ರಲ್ಲಿ ಮತ್ತೆ ಬಿಜೆಪಿ ಮೈತ್ರಿಕೂಟಕ್ಕೆ ಮರಳಿದ್ದ ಅವರು, 2022ರಲ್ಲಿ ಆರ್ಜೆಡಿ ಮೈತ್ರಿಕೂಟಕ್ಕೆ ವಾಪಸ್ಸಾಗಿದ್ದರು. ನಂತರ, ಕಳೆದ ವರ್ಷ ಅವರು ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾದರು ಎಂದು ವಾಗ್ದಾಳಿ ನಡೆಸಿದ್ದಾರೆ.
“ಈ ಚಕ್ರವನ್ನು ಮುರಿಯಲು ಬಿಜೆಪಿಯ ಕಮಲದೊಂದಿಗೆ ಜೆಡಿಯು ಬಾಣ ತೇಲದಂತೆ ಅಥವಾ ಆರ್ಜೆಡಿ ಲಾಟೀನಿನೊಂದಿಗೆ ಅದು ಮಿನುಗದಂತೆ ತಡೆಯಲು ಮುಂಬರುವ ಚುನಾವಣೆಯಲ್ಲಿ ಜೆಡಿಯು ಒಂದೂ ಸ್ಥಾನ ಗೆಲ್ಲದಂತೆ ಜನರು ಮತ ಚಲಾಯಿಸಬೇಕು ಎಂದು ನಾನು ಮನವಿ ಮಾಡುತ್ತೇನೆ. ಆಗ ಮಾತ್ರ ದೈಹಿಕವಾಗಿ ದಣಿದಿರುವ ಹಾಗೂ ಮಾನಸಿಕವಾಗಿ ನಿವೃತ್ತರಾಗಿರುವ ಮುಖ್ಯಮಂತ್ರಿಯಿಂದ ಕಳಚಿಕೊಳ್ಳಲು ಸಾಧ್ಯ” ಎಂದು ಅವರು ಕರೆ ನೀಡಿದ್ದಾರೆ.
ಅಧಿಕಾರದಲ್ಲಿರುವಾಗ ಬಿಜೆಪಿಯು ನಿತೀಶ್ ಕುಮಾರ್ ಅವರನ್ನು ಮುಖವಾಡದಂತೆ ಬಳಸಿಕೊಳ್ಳುತ್ತಿದೆ ಎಂದೂ ಟೀಕಿಸಿದ್ದಾರೆ.