ನಿರ್ಮಲಾ ಜೊತೆ ಚಹಾಕೂಟ ವಿವಾದ; ವಿಪಕ್ಷದ ಆರೋಪಗಳನ್ನು ತಳ್ಳಿ ಹಾಕಿದ ಕೇರಳ ಸಿಎಂ ಪಿಣರಾಯಿ

Photo credit: newindianexpress.com
ತಿರುವನಂತಪುರಂ: ಕೇರಳ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗಿನ ಇತ್ತೀಚಿನ ಚಹಾಕೂಟ ಸಭೆಯನ್ನು ಹೊಸದಿಲ್ಲಿಯಲ್ಲಿ ಆಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ವಿರೋಧ ಪಕ್ಷದ ಆರೋಪಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಳ್ಳಿಹಾಕಿದ್ದಾರೆ.
ಸೀತಾರಾಮನ್ ಅವರ ಭೇಟಿ ಸೌಜನ್ಯದ ಭೇಟಿಯಾಗಿದ್ದು, ಯಾವುದೇ ಅಧಿಕೃತ ವಿಷಯಗಳ ಬಗ್ಗೆ ಚರ್ಚಿಸಲಾಗಿಲ್ಲ ಎಂದು ಸಿಎಂ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಸರ್ಕಾರ ಮೃದು ಧೋರಣೆಯನ್ನು ತಾಳಿದೆ ಎಂಬ ಹೇಳಿಕೆಗಳನ್ನು ಅವರು ನಿರಾಕರಿಸಿದ್ದಾರೆ. ಒಂದು ಸೌಜನ್ಯದ ಭೇಟಿಯು ರಾಜಕೀಯ ನಿಲುವುಗಳನ್ನು ದುರ್ಬಲಗೊಳಿಸುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ರಾಜ್ಯ ಬಜೆಟ್ನಲ್ಲಿ ಅನುದಾನ ಬೇಡಿಕೆಯ ಕುರಿತು ಚರ್ಚೆಯ ಸಂದರ್ಭದಲ್ಲಿ ವಿರೋಧ ಪಕ್ಷದ ಮಾಜಿ ನಾಯಕ ರಮೇಶ್ ಚೆನ್ನಿತ್ತಲ ಅವರು ಎತ್ತಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ಪಿಣರಾಯಿ ವಿಜಯನ್, ಸಭೆಗೆ ಕಾರಣವಾದ ವಿಚಾರವನ್ನು ವಿವರಿಸಿದರು.
ನಾನು ಸಿಪಿಐ(ಎಂ) ಪಾಲಿಟ್ ಬ್ಯೂರೋ ಸಭೆಯಲ್ಲಿ ಭಾಗವಹಿಸಲು ದಿಲ್ಲಿಗೆ ತೆರಳಿದ್ದೆ. ಈ ವೇಳೆ ರಾಜ್ಯಪಾಲರು, ಸಂಸತ್ ಸದಸ್ಯರಿಗೆ ಆಯೋಜಿಸಿದ್ದ ಚಹಾಕೂಟಕ್ಕೆ ನನ್ನನ್ನು ಆಹ್ವಾನಿಸಿದರು. ಆದರೆ, ಬೇರೆ ಕಾರ್ಯಕ್ರಮ ನಿಗದಿಯಾಗಿದ್ದರಿಂದ ಆರಂಭದಲ್ಲಿ ಅದನ್ನು ನಿರಾಕರಿಸಿದೆ. ಆದರೆ ಕಾಕತಾಳೀಯವೆಂಬಂತೆ ಒಂದೇ ವಿಮಾನದಲ್ಲಿ ನಾವಿಬ್ಬರು ಪರಸ್ಪರ ಪಕ್ಕದಲ್ಲಿ ಕುಳಿತು ಪ್ರಯಾಣಿಸಿದೆವು. ಈ ವೇಳೆ ರಾಜ್ಯಪಾಲರು ಮತ್ತೆ ಆಹ್ವಾನಿಸಿದರು. ಇದರಿಂದಾಗಿ ಚಹಾಕೂಟದಲ್ಲಿ ಭಾಗವಹಿಸುವುದಾಗಿ ಹೇಳಿದೆ. ಈ ವೇಳೆ ಹಣಕಾಸು ಸಚಿವರಿಗಾಗಿ ಏರ್ಪಡಿಸಲಾದ ಉಪಹಾರ ಸಭೆಯಲ್ಲಿ ಭಾಗವಹಿಸಬಹುದೇ ಎಂದು ರಾಜ್ಯಪಾಲರ ಬಳಿ ನಾನು ಕೇಳಿದೆ ಎಂದು ಪಿಣರಾಯ್ ವಿಜಯನ್ ಹೇಳಿದರು.
"ನನಗೆ ನನ್ನದೇ ಆದ ರಾಜಕೀಯವಿದೆ, ರಾಜ್ಯಪಾಲರಿಗೆ ಅವರದ್ದೇ ಆದ ರಾಜಕೀಯವಿದೆ. ಸೀತಾರಾಮನ್ ಅವರಿಗೆ ಅವರದ್ದೇ ಆದ ರಾಜಕೀಯವಿದೆ. ವೈವಿಧ್ಯಮಯ ರಾಜಕೀಯ ನಿಲುವುಗಳನ್ನು ಹೊಂದಿರುವ ಜನರು ಭೇಟಿಯಾದಾಗ, ಅವರ ನಿಲುವುಗಳು ದುರ್ಬಲಗೊಳ್ಳುತ್ತವೆ ಎಂದು ಅರ್ಥವಲ್ಲ" ಎಂದು ಮುಖ್ಯಮಂತ್ರಿಗಳು ತಮ್ಮ ರಾಜಕೀಯ ಸಿದ್ಧಾಂತಗಳು ಭಿನ್ನವಾಗಿವೆ ಎಂದು ಒತ್ತಿ ಹೇಳಿದರು.
ಸಿಎಂ ವಿಜಯನ್ ಉಪಹಾರ ಸಭೆಯನ್ನು ಕೇರಳಕ್ಕೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆಗಳನ್ನು ಚರ್ಚಿಸಿದ ಸೌಹಾರ್ದಯುತ ಸಭೆ ಎಂದು ವಿವರಿಸಿದರು. ಈ ಸಮಯದಲ್ಲಿ ಹಣಕಾಸು ಸಚಿವರು ಕೆಲವು ವಿಷಯಗಳ ಬಗ್ಗೆ ತಮ್ಮ ಕಳವಳಗಳನ್ನು ಹಂಚಿಕೊಂಡರು. ಸಭೆಯ ಸಮಯದಲ್ಲಿ ಯಾವುದೇ ಮನವಿ ಪತ್ರವನ್ನು ಸಲ್ಲಿಸಲಾಗಿಲ್ಲ ಎಂದು ಅವರು ಹಿಂಬಾಗಿಲಿನ ಮಾತುಕತೆಗಳ ಊಹಾಪೋಹಗಳನ್ನು ತಳ್ಳಿಹಾಕಿದರು.
"ಇದು ಕೇವಲ ಉಪಹಾರ ಸಭೆಯಾಗಿತ್ತು. ಅದಕ್ಕೆ ಹೆಚ್ಚಿನ ಅರ್ಥ ಕಲ್ಪಿಸುವ ಅಗತ್ಯವಿಲ್ಲ " ಎಂದು ಅವರು ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗಿನ ತಮ್ಮ ಭೇಟಿಯ ವಿವರಗಳನ್ನು ಬಹಿರಂಗಪಡಿಸುವಂತೆ ಚೆನ್ನಿತ್ತಲ ಅವರು ಮುಖ್ಯಮಂತ್ರಿಗೆ ಸವಾಲು ಹಾಕಿದರು. ರಾಜ್ಯಪಾಲರು ಸಾಮಾನ್ಯವಾಗಿ ಕೇಂದ್ರದಲ್ಲಿ ಆಡಳಿತ ಪಕ್ಷದ ರಾಜಕೀಯ ನಿಲುವನ್ನು ಎತ್ತಿಹಿಡಿಯುತ್ತಾರೆ. ಈ ನಿಟ್ಟಿನಲ್ಲಿ ಈ ಸಭೆಯು ಸಿಪಿಐ (ಎಂ) ಮತ್ತು ಬಿಜೆಪಿ ನಡುವಿನ ದೊಡ್ಡ ರಾಜಕೀಯ ಒಪ್ಪಂದದ ಭಾಗವಾಗಿದೆಯೇ ಎಂದು ಪ್ರಶ್ನಿಸಿದರು.
"ಸಭೆಯಲ್ಲಿ ಏನಾಯಿತು ಎಂದು ತಿಳಿದುಕೊಳ್ಳುವ ಹಕ್ಕು ಕೇರಳದ ಜನರಿಗೆ ಇದೆ. ರಾಜ್ಯಪಾಲರು ಸಿಪಿಐ (ಎಂ) ಮತ್ತು ಬಿಜೆಪಿ ನಡುವೆ ಸಂಪರ್ಕ ಸೇತುವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಆರೋಪಿಸುವುದರಲ್ಲಿ ತಪ್ಪೇನಿದೆ?" ಎಂದು ಅವರು ಕೇಳಿದ್ದರು.
ಕೇರಳದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷವು 69 ಸ್ಥಾನಗಳಲ್ಲಿ ಬಿಜೆಪಿಯೊಂದಿಗೆ ಚುನಾವಣಾ ಒಪ್ಪಂದ ಮಾಡಿಕೊಂಡಿದೆ ಎಂದ ಅವರು, ಸಿಪಿಐ (ಎಂ) ಬಿಜೆಪಿಯೊಂದಿಗೆ ರಹಸ್ಯವಾಗಿ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.