ಹೈಟೆಕ್ ಕ್ಷೇತ್ರಗಳತ್ತ ಗಮನ ಹರಿಸುವಲ್ಲಿ ವಿಫಲ : ಭಾರತದ ಸ್ಟಾರ್ಟ್ಅಪ್ಗಳನ್ನು ಟೀಕಿಸಿದ ಪಿಯೂಷ್ ಗೋಯಲ್

ಕೇಂದ್ರ ಸಚಿವ ಪಿಯೂಷ್ ಗೋಯಲ್ (Photo: PTI)
ಹೊಸದಿಲ್ಲಿ: ಭಾರತೀಯ ಸ್ಟಾರ್ಟ್ಅಪ್ ಸಮುದಾಯ ಆಹಾರ ವಿತರಣೆ, ಐಸ್ ಕ್ರೀಮ್ ತಯಾರಿಕೆ, ಬೆಟ್ಟಿಂಗ್ ಮತ್ತು ಸ್ಪೋರ್ಟ್ಸ್ ಅಪ್ಲಿಕೇಶನ್ಗಳ ಮೇಲೆ ಗಮನಹರಿಸುವುದನ್ನು ಕಡಿಮೆಗೊಳಿಸಿ ರೊಬೊಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯಂತಹ (AI) ತಂತ್ರಜ್ಞಾನ ವಲಯದತ್ತ ಗಮನ ಹರಿಸಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದರು.
ಭಾರತದ ಸ್ಟಾರ್ಟ್ಅಪ್ ಇಕೋಸಿಸ್ಟಮ್ನ್ನು ಟೀಕಿಸಿದ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ದೇಶದಲ್ಲಿ ಅನೇಕ ಸ್ಟಾರ್ಟ್ಅಪ್ಗಳು ಆಹಾರ ವಿತರಣೆ ಮತ್ತು ಬೆಟ್ಟಿಂಗ್ ಮತ್ತು ಫ್ಯಾಂಟಸಿ ಸ್ಪೋರ್ಟ್ಸ್ ಅಪ್ಲಿಕೇಶನ್ಗಳ ಮೇಲೆ ಹೆಚ್ಚು ಗಮನಹರಿಸಿದರೆ, ಚೀನಾದಲ್ಲಿ ಇವಿ, ಬ್ಯಾಟರಿ ಟೆಕ್, ಸೆಮಿಕಂಡಕ್ಟರ್ಗಳು ಮತ್ತು ಎಐ ಬಗ್ಗೆ ಗಮನ ಹರಿಸುತ್ತಿವೆ ಎಂದು ಹೇಳಿದರು.
ದೇಶವು ತಾಂತ್ರಿಕ ಪ್ರಗತಿಗೆ ಶ್ರಮಿಸುವುದಕ್ಕಿಂತ ಕಡಿಮೆ ಸಂಬಳದ ಗಿಗ್ ಉದ್ಯೋಗಿಗಳಿಂದ ತೃಪ್ತವಾಗಿದೆಯೇ? ನಾವು ಐಸ್ ಕ್ರೀಮ್ ಅಥವಾ ಚಿಪ್ಸ್ ಮಾಡಬೇಕೇ? ನಾವು ವಸ್ತುಗಳನ್ನು ಮಾರಾಟ ಮಾಡಲು ಬಯಸುತ್ತೇವೆಯೇ? ಸರಕಾರದ ಅಂಕಿಅಂಶಗಳ ಪ್ರಕಾರ, ಭಾರತ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಕೇಂದ್ರವಾಗಿದೆ. ಸುಮಾರು 1.57 ಲಕ್ಷ ಸ್ಟಾರ್ಟಪ್ಗಳು ಸರಕಾರದಿಂದ ಗುರುತಿಸಲ್ಪಟ್ಟಿವೆ ಎಂದು ಹೇಳಿದರು.
ಸ್ಟಾರ್ಟ್ಅಪ್ಗಳು ತಮ್ಮ ಉದ್ದೇಶವನ್ನು ಮರು ಮೌಲ್ಯಮಾಪನ ಮಾಡುವಂತೆ ಒತ್ತಾಯಿಸಿದ ಕೇಂದ್ರ ಸಚಿವರು, ನಾವು ಡೆಲಿವರಿ ಬಾಯ್ ಆಗಿ ಕೆಲಸ ಮಾಡಲು ಸಂತೋಷಪಡುತ್ತೇವೆಯೇ? ಅದು ಭಾರತದ ವಿಧಿಯೇ? ಇದು ಸ್ಟಾರ್ಟ್ಅಪ್ ಅಲ್ಲ, ಇದು ಉದ್ಯಮಶೀಲತೆ. ಚೀನಾ AI ಮತ್ತು ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ಭಾರತೀಯ ಸ್ಟಾರ್ಟ್ಅಪ್ಗಳು ರಿಯಾಲಿಟಿ ಚೆಕ್ ಮಾಡುವ ಅಗತ್ಯವಿದೆ ಎಂದು ಗೋಯಲ್ ಹೇಳಿದರು.