ಚುನಾವಣಾ ಚರ್ಚೆಯಲ್ಲಿ ಚರ್ಮದ ಬಣ್ಣ ತರುವ ಮೂಲಕ ಪ್ರಧಾನಿಯಿಂದ ಜನಾಂಗೀಯ ತಾರತಮ್ಯ: ಚಿದಂಬರಂ
ಪಿ. ಚಿದಂಬರಂ | Photo: PTI
ಹೊಸದಿಲ್ಲಿ: ಚುನಾವಣೆ ಚರ್ಚೆಯಲ್ಲಿ ಚರ್ಮದ ಬಣ್ಣವನ್ನು ತರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಜನಾಂಗೀಯ ತಾರತಮ್ಯ ಎಸಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಗುರುವಾರ ಆರೋಪಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷ ಯಶ್ವಂತ ಸಿನ್ಹ ಅವರಿಗೆ ನೀಡಿದ ಬೆಂಬಲ ಚರ್ಮದ ಬಣ್ಣವನ್ನು ಆಧರಿಸಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ‘ಎಕ್ಸ್’ನ ಪೋಸ್ಟ್ನಲ್ಲಿ ಅವರು, ರಾಷ್ಟ್ರಪತಿ ಹುದ್ದೆಗೆ ಈ ಹಿಂದೆ ನಡೆದ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಹಾಗೂ ಯಶ್ವಂತ್ ಸಿನ್ಹಾ ಅವರು ಅಭ್ಯರ್ಥಿಗಳಾಗಿದ್ದರು. ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳು ಮುರ್ಮು ಅವರಿಗೆ ಬೆಂಬಲ ನೀಡಿದ್ದವು. ಕಾಂಗ್ರೆಸ್ ಸೇರಿದಂತೆ 17 ಪ್ರತಿಪಕ್ಷಗಳು ಸಿನ್ಹಾ ಅವರಿಗೆ ಬೆಂಬಲ ನೀಡಿದ್ದವು ಎಂದಿದ್ದಾರೆ.
‘‘ಅಭ್ಯರ್ಥಿಗೆ ಬೆಂಬಲ ಚರ್ಮದ ಬಣ್ಣವನ್ನು ಆಧರಿಸಿರಲಿಲ್ಲ. ಅಭ್ಯರ್ಥಿಯ ವಿರೋಧವೂ ಚರ್ಮದ ಬಣ್ಣವನ್ನು ಆಧರಿಸಿರಲಿಲ್ಲ. ಬೆಂಬಲ ಅಥವಾ ವಿರೋಧ ರಾಜಕೀಯ ನಿರ್ಧಾರವಾಗಿತ್ತು. ಪ್ರತಿಯೊಬ್ಬ ಮತದಾರ ಕೂಡ ಆತನ ಅಥವಾ ಆಕೆಯ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿದ್ದರು’’ ಎಂದು ಅವರು ಹೇಳಿದರು.
‘‘ಚುನಾವಣಾ ಚರ್ಚೆಯಲ್ಲಿ ಪ್ರಧಾನಿ ಅವರು ಚರ್ಮದ ಬಣ್ಣವನ್ನು ಯಾಕೆ ತಂದರು? ಪ್ರಧಾನಿ ಅವರ ಹೇಳಿಕೆ ಸಂಪೂರ್ಣವಾಗಿ ಅಪ್ರಸ್ತುತ ಹಾಗೂ ಸ್ಪಷ್ಟವಾಗಿ ಜನಾಂಗೀಯ ತಾರತಮ್ಯದಿಂದ ಕೂಡಿದೆ’’ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರು ಚರ್ಮದ ಬಣ್ಣದ ಕುರಿತು ನೀಡಿರುವ ಹೇಳಿಕೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದರು. ಚರ್ಮದ ಬಣ್ಣದ ಆಧಾರದ ಮೇಲೆ ಮಾಡುವ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ಪ್ರಧಾನಿ ಅವರು, ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮು ಅವರನ್ನು ಸೋಲಿಸುವಂತೆ ಕಾಂಗ್ರೆಸ್ ಕೋರಿರುವುದು ಅವರ ಚರ್ಮದ ಬಣ್ಣ ಕಪ್ಪು ಇರುವ ಕಾರಣಕ್ಕೆ ಎಂಬುದು ಈಗ ಅರ್ಥವಾಯಿತು ಎಂದು ಹೇಳಿದ್ದರು.