ಸುಧಾರಿತ ಭೂಕಂಪ ಮುನ್ನೆಚ್ಚರಿಕೆ ವ್ಯವಸ್ಥೆ ಅಭಿವೃದ್ಧಿ ಪಡಿಸಿ : ಪ್ರಧಾನಿ ಕರೆ
ಭಾರತೀಯ ಹವಾಮಾನ ಇಲಾಖೆಯ 150ನೇ ವರ್ಷದ ಆಚರಣೆ
ನರೇಂದ್ರ ಮೋದಿ | PC : PTI
ಹೊಸದಿಲ್ಲಿ : ಸುಧಾರಿತ ಭೂಕಂಪ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿಜ್ಞಾನಿಗಳಿಗೆ ಕರೆ ನೀಡಿದ್ದಾರೆ ಹಾಗೂ ಪ್ರಾಕೃತಿಕ ವಿಪತ್ತು ನಿರ್ವಹಣೆಯಲ್ಲಿ ಹವಾಮಾನ ಅಧ್ಯಯನವು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯ 150ನೇ ವರ್ಷದ ಆಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತೀಯ ಹವಾಮಾನ ಇಲಾಖೆಯು ಭಾರತೀಯ ವೈಜ್ಞಾನಿಕ ಸಾಧನೆಗಳ ಮುಂಚೂಣಿಯಲ್ಲಿದೆ ಎಂದು ಹೇಳಿದರು ಮತ್ತು ವಿಪತ್ತು ನಿರ್ವಹಣೆಗೆ ಅದು ನೀಡಿದ ದೇಣಿಗೆಗಳನ್ನು ಶ್ಲಾಘಿಸಿದರು.
‘‘ಸುಧಾರಿತ ಹವಾಮಾನ ಮುನ್ನೆಚ್ಚರಿಕೆಯು, ಚಂಡಮಾರುತಳಿಂದ ಸಂಭವಿಸುವ ಸಾವು-ನೋವುಗಳನ್ನು ಕನಿಷ್ಠಗೊಳಿಸಿದೆ ಮತ್ತು ಆರ್ಥಿಕ ನಷ್ಟಗಳನ್ನು ಕಡಿಮೆ ಮಾಡಿದೆ’’ ಎಂದು ಮೋದಿ ನುಡಿದರು. ನಿಖರ ಹವಾಮಾನ ಮುನ್ನೆಚ್ಚರಿಕೆಗಳು ಹೂಡಿಕೆದಾರರ ವಿಶ್ವಾಸವನ್ನು ಹೇಗೆ ಬಲಪಡಿಸಿವೆ ಮತ್ತು ಹವಾಮಾನ ವೈಪರೀತ್ಯ ಪೀಡಿತ ಪ್ರದೇಶಗಳಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಹೇಗೆ ಕಾರಣವಾಗಿವೆ ಎನ್ನುವುದನ್ನು ಅವರು ಬಣ್ಣಿಸಿದರು.
ಗುಜರಾತ್ ಗೆ 1998ರಲ್ಲಿ ಅಪ್ಪಳಿಸಿದ ವಿನಾಶಕಾರಿ ಚಂಡಮಾರುತ ಮತ್ತು ಒಡಿಶಾಕ್ಕೆ 1999ರಲ್ಲಿ ಅಪ್ಪಳಿಸಿದ ಮಹಾ ಚಂಡಮಾರುತ ಸೃಷ್ಟಿಸಿದ ಅಗಾಧ ದುರಂತಗಳನ್ನು ಅವರು ಸ್ಮರಿಸಿದರು. ಆ ಚಂಡಮಾರುತಗಳು ಸಾವಿರಾರು ಜನರನ್ನು ಬಲಿತೆಗೆದುಕೊಂಡಿದ್ದವು. ‘‘ಆದರೆ, ಈಗ ವಿಶ್ವಾಸಾರ್ಹ ಮುನ್ನೆಚ್ಚರಿಕೆಗಳ ಪರಿಣಾಮವಾಗಿ ಪ್ರಾಣ ಹಾಕಿ ಕನಿಷ್ಠ ಮಟ್ಟಕ್ಕೆ ಇಳಿದಿದೆ’’ ಎಂದರು.