ಕೋವಿಡ್ ನಂತರದ ವರ್ಷದಲ್ಲಿ 912 ಕೋಟಿ ರೂ. ದೇಣಿಗೆ ಸ್ವೀಕರಿಸಿದ ಪಿಎಂ ಕೇರ್ಸ್ ಫಂಡ್
PC : X
ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕದ ನಂತರವೂ ದೇಣಿಗೆಗಳು ಬರುತ್ತಿದ್ದರಿಂದ 2022-23ನೇ ವಿತ್ತವರ್ಷದಲ್ಲಿ ಪಿಎಂ ಕೇರ್ಸ್ ನಿಧಿಯು 912 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು.
ಪರಿಶೋಧಿತ ಲೆಕ್ಕಪತ್ರಗಳು ಸಾರ್ವಜನಿಕ ಡೊಮೇನ್ನಲ್ಲಿ ಲಭ್ಯವಿರುವ ಇತ್ತೀಚಿನ ವರ್ಷವಾಗಿರುವ 2022-23ರಲ್ಲಿ ಪಿಎಂ ಕೇರ್ಸ್ ಫಂಡ್ 909.64 ಕೋಟಿ ರೂ.ಗಳನ್ನು ಸ್ವಯಂಪ್ರೇರಿತ ದೇಣಿಗೆಯಾಗಿ ಮತ್ತು 2.57 ಕೋಟಿ ರೂ.ಗಳನ್ನು ವಿದೇಶಿ ದೇಣಿಗೆಗಳ ರೂಪದಲ್ಲಿ ಸ್ವೀಕರಿಸಿತ್ತು.
912 ಕೋಟಿ ರೂ.ಗಳ ದೇಣಿಗೆಗಳ ಜೊತೆಗೆ ಫಂಡ್ ಬಡ್ಡಿಯಿಂದ 170.38 ಕೋಟಿ ರೂ.ಗಳ ಆದಾಯವನ್ನೂ ಪಡೆದುಕೊಂಡಿದೆ. ಕೇಂದ್ರ/ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಡೆಸುತ್ತಿರುವ ಸರಕಾರಿ ಆಸ್ಪತ್ರೆಗಳಿಗೆ 50,000 ‘ಮೇಡ್ ಇನ್ ಇಂಡಿಯಾ’ ಖರೀದಿಯಿಂದ ವಾಪಸಾತಿ (202 ಕೋ.ರೂ.) ಸೇರಿದಂತೆ ವಿವಿಧ ಮೂಲಗಳಿಂದ 225 ಕೋ.ರೂ.ಗಳ ವಾಪಸಾತಿಗಳನ್ನೂ ಅದು ಸ್ವೀಕರಿಸಿದೆ.
ಫಂಡ್ 2022-23ನೇ ವಿತ್ತವರ್ಷದಲ್ಲಿ ಒಟ್ಟು 439 ಕೋಟಿ ರೂ.ಗಳನ್ನು ವಿತರಿಸಿದೆ. ಇದರಲ್ಲಿ ಮಕ್ಕಳಿಗಾಗಿ ಪಿಎಂ ಕೇರ್ಸ್ಗಾಗಿ 346 ಕೋಟಿ ರೂ., 99,986 ಆಕ್ಸಿಜನ್ ಕಾನ್ಸಂಟ್ರೇಟರ್ಗಳ ಖರೀದಿಗಾಗಿ 91.87 ಕೋಟಿ ರೂ.,24,000 ರೂ.ಗಳ ಕಾನೂನು ಶುಲ್ಕ ಹಾಗೂ 278 ರೂ.ಗಳ ಬ್ಯಾಂಕ್ ಮತ್ತು ಎಸ್ಎಂಎಸ್ ಶುಲ್ಕಗಳು ಸೇರಿವೆ.
2022-23ನೇ ವಿತ್ತವರ್ಷದ ಅಂತ್ಯದಲ್ಲಿ ಪಿಎಂ ಕೇರ್ಸ್ ಫಂಡ್ನಲ್ಲಿ 6,284 ಕೋಟಿ ರೂ.ಗಳ ಬ್ಯಾಲನ್ಸ್ ಉಳಿದಿತ್ತು. ಇದು 2021-22ರ ವಿತ್ತವರ್ಷದ ಅಂತ್ಯದಲ್ಲಿದ್ದ 5,416 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇ.16ರಷ್ಟು ಹೆಚ್ಚಾಗಿದೆ. 2020-21 ಮತ್ತು 2019-20ರ ಅಂತ್ಯಗಳಲ್ಲಿ ಮುಕ್ತಾಯದ ಬ್ಯಾಲನ್ಸ್ ಅನುಕ್ರಮವಾಗಿ 7,014 ಕೋಟಿ ರೂ. ಮತ್ತು 3,077 ಕೋಟಿ ರೂ.ಗಳಾಗಿದ್ದವು.
ಪಿಎಂ ಕೇರ್ಸ್ಫಂಡ್ 2019-20ರಿಂದ 2022-23ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು 13,605 ಕೋಟಿ ರೂ.ಗಳನ್ನು ಸ್ವೀಕರಿಸಿದ್ದು, ಇದರಲ್ಲಿ 13,067 ಕೋಟಿ ರೂ.ಗಳ ಸ್ವಯಂಪ್ರೇರಿತ ದೇಣಿಗೆಗಳು ಮತ್ತು 538 ಕೋಟಿ ರೂ.ಗಳ ವಿದೇಶಿ ದೇಣಿಗೆಗಳು ಸೇರಿವೆ. ಈ ಅವಧಿಯಲ್ಲಿ ಅದು 565 ಕೋಟಿ ರೂ.ಗಳ ಬಡ್ಡಿ ಆದಾಯವನ್ನು ಪಡೆದುಕೊಂಡಿದೆ.
ದೇಶದಲ್ಲಿ ಕೋವಿಡ್ ಲಾಕ್ಡೌನ್ ಘೋಷಿಸಿದ ಮೂರು ದಿನಗಳ ಬಳಿಕ 2020,ಮಾ.27ರಂದು ನೋಂದಣಿ ಕಾಯ್ದೆ,1908ರ ಅಡಿ ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿ ಪಿಎಂ ಕೇರ್ಸ್ ಫಂಡ್ ಅನ್ನು ನೋಂದಾಯಿಸಲಾಗಿತ್ತು. ಕೋವಿಡ್ನಂತಹ ಸಾಂಕ್ರಾಮಿಕದಿಂದ ಉದ್ಭವಗೊಳ್ಳುವ ಯಾವುದೇ ರೀತಿಯ ತುರ್ತು ಮತ್ತು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಲು ಹಾಗೂ ಪೀಡಿತರಿಗೆ ಪರಿಹಾರವನ್ನು ಒದಗಿಸುವ ಪ್ರಾಥಮಿಕ ಉದ್ದೇಶಕ್ಕೆ ಮೀಸಲಾದ ನಿಧಿಯನ್ನು ಹೊಂದುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಫಂಡ್ನ್ನು ಸ್ಥಾಪಿಸಲಾಗಿತ್ತು.