ಮಾರಿಷಸ್ಗೆ ಬಂದಿಳಿದ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ; 20ಕ್ಕೂ ಅಧಿಕ ಭಾರತ ಅನುದಾನಿತ ಯೋಜನೆಗಳಿಗೆ ಚಾಲನೆ

Photo: X/@narendramodi
ಪೋರ್ಟ್ ಲೂಯಿಸ್: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಮಾರಿಷಸ್ ತಲುಪಿದ್ದು, ಈ ವೇಳೆ ಅವರು ಸಾಮರ್ಥ್ಯ ವೃದ್ಧಿ ಯೋಜನೆಯಿಂದ ಮೊದಲ್ಗೊಂಡು, ಸಮುದಾಯ ಸಂಬಂಧಿತ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯವರೆಗೆ 20ಕ್ಕೂ ಹೆಚ್ಚು ಭಾರತ ಅನುದಾನಿತ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗ್ನೇಯ ಆಫ್ರಿಕಾದ ದ್ವೀಪ ರಾಷ್ಟ್ರವಾದ ಮಾರಿಷಸ್ ನಲ್ಲಿ ನೂತನ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಲಿದ್ದಾರೆ.
ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಮಾರಿಷಸ್ ನ ಪ್ರಧಾನಿ ನವೀನ್ ರಾಮ್ ಗೂಲಮ್ ಅವರೊಂದಿಗೆ ನಾಗರಿಕ ಸೇವೆ ಕಾಲೇಜು ಕಟ್ಟಡವನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ಈ ಕಟ್ಟಡವು ಅಂದಾಜು 4.75 ದಶಲಕ್ಷ ಅಮೆರಿಕನ್ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, 2017ರಲ್ಲಿ ಈ ಯೋಜನೆಯ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಮಾಡಿದ್ದವು.
ಸುಮಾರು 47 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರದೇಶ ಆರೋಗ್ಯ ಕೇಂದ್ರ ಮತ್ತು 20 ಸಮುದಾಯ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಆಗಿ ಉದ್ಘಾಟಿಸಲಿದ್ದಾರೆ. ಈ ಸಮುದಾಯ ಯೋಜನೆಗಳಲ್ಲಿ ಕ್ರೀಡಾ ಸಂಬಂಧಿತ ಮೂಲಸೌಕರ್ಯವೂ ಸೇರಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಾರಿಷಸ್ ನ ಭಾರತದ ಹೈಕಮಿಷನರ್ ಅನುರಾಗ್ ಶ್ರೀವಾಸ್ತವ, “ಇವೆಲ್ಲ ಸಮುದಾಯ ಅಭಿವೃದ್ಧಿ ಯೋಜನೆಗಳಾಗಿದ್ದು, ಇವುಗಳನ್ನು ಕಡಿಮೆ ಅವಧಿಯಲ್ಲಿ ಕ್ಷಿಪ್ರವಾಗಿ ಕಾರ್ಯಗತಗೊಳಿಸಲಾಗಿದೆ. ಈ ಯೋಜನೆಗಳಲ್ಲಿ ಕೆಲವು ಕ್ರೀಡಾ ಕ್ಷೇತ್ರಕ್ಕೂ ಸಂಬಂಧಿಸಿವೆ. ನಾವು ಫುಟ್ ಬಾಲ್ ಮೈದಾನಗಳು ಹಾಗೂ ಇನ್ನಿತರ ಕ್ರೀಡಾ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಿದ್ದೇವೆ. ಮಾರಿಷಸ್ ನಾದ್ಯಂತ ಇವುಗಳನ್ನು ಕಾಣಬಹುದಾಗಿದೆ” ಎಂದು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ತಮ್ಮ ಈ ಭೇಟಿಯಿಂದ ಉಭಯ ರಾಷ್ಟ್ರಗಳ ನಡುವೆ ಹೊಸ ಮತ್ತು ಪ್ರಕಾಶಮಾನವಾದ ಅಧ್ಯಾಯ ತೆರೆದುಕೊಳ್ಳನಲಿದೆ” ಎಂದು ತಡರಾತ್ರಿ ಮಾರಿಷಸ್ ಗೆ ತೆರಳುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.