ಉಕ್ರೇನ್ ಗಿಂತ ಮೊದಲು ಮಣಿಪುರಕ್ಕೆ ಭೇಟಿ ನೀಡಲು ಪ್ರಧಾನಿಯನ್ನು ಆಹ್ವಾನಿಸಿದ್ದೀರಾ? : ಕಾಂಗ್ರೆಸ್ ಪ್ರಶ್ನೆ
ಎನ್.ಬಿರೇನ್ ಸಿಂಗ್ , ನರೇಂದ್ರ ಮೋದಿ | PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಹೊಸದಿಲ್ಲಿಯಲ್ಲಿ ಆಯೋಜನೆಗೊಂಡಿದ್ದ ನೀತಿ ಆಯೋಗ ಸೇರಿದಂತೆ ಎರಡು ಸಭೆಗಳಲ್ಲಿ ಭಾಗವಹಿಸಿದ್ದ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರೇನಾದರೂ ಹಿಂಸಾಚಾರ ಪೀಡಿತ ರಾಜ್ಯದ ಕುರಿತು ಚರ್ಚಿಸಲು ಹಾಗೂ ಅವರನ್ನು ಅಲ್ಲಿಗೆ ಆಹ್ವಾನಿಸಲೇನಾದರೂ ಪ್ರತ್ಯೇಕವಾಗಿ ಮೋದಿಯವರನ್ನು ಭೇಟಿ ಮಾಡಿದ್ದರೇ ಎಂದು ಮಣಿಪುರ ಜನತೆ ಪ್ರಶ್ನಿ ಸುತ್ತಿದ್ದಾರೆ ಎಂದು ರವಿವಾರ ಕಾಂಗ್ರೆಸ್ ಕುಟುಕಿದೆ.
“ಮಣಿಪುರದ ಜನತೆ ಕೇಳುತ್ತಿರುವ ಸರಳ ಪ್ರಶ್ನೆಯೆಂದರೆ, 2023ರ ಮೇ 3ರಂದು ಹತ್ತಿ ಉರಿಯಲು ಪ್ರಾರಂಭವಾದ ಮಣಿಪುರದ ಪರಿಸ್ಥಿತಿಯ ಕುರಿತು ಮುಖಾಮುಖಿ ಚರ್ಚಿಸಲು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರೇನಾದರೂ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದರೆ ಎಂಬುದಾಗಿದೆ” ಎಂದು ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ.
ಉಕ್ರೇನ್ ಪ್ರವಾಸಕ್ಕೂ ಮುನ್ನ ಅಥವಾ ಉಕ್ರೇನ್ ಪ್ರವಾಸದ ನಂತರವೇನಾದರೂ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಬಿರೇನ್ ಸಿಂಗ್ ಮಣಿಪುರಕ್ಕೆ ಆಹ್ವಾನಿಸಿದ್ದಾರೆಯೆ ಎಂದೂ ಅವರು ಲೇವಡಿ ಮಾಡಿದ್ದಾರೆ.
The Chief Minister of Manipur attends the NITI Aayog meeting in New Delhi presided over by the self-anointed non-biological PM.
— Jairam Ramesh (@Jairam_Ramesh) July 28, 2024
Then the Manipur CM attends a meeting of BJP CMs and Deputy CMs presided over by the same deity.
The simple question that the people of Manipur are…
ಮೇ, 2023ರಲ್ಲಿ ಮೈತೈ ಹಾಗೂ ಕುಕಿ ಸಮುದಾಯಗಳ ನಡುವೆ ಜನಾಂಗೀಯ ಹಿಂಸಾಚಾರ ಸ್ಫೋಟಗೊಂಡಿದ್ದರಿಂದ ಮಣಿಪುರ ನಲುಗಿ ಹೋಗಿದೆ. ಇಲ್ಲಿಯವರೆಗೆ ಈ ಜನಾಂಗೀಯ ಸಂಘರ್ಷದಲ್ಲಿ ಸುಮಾರು 200 ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ.