ಮಣಿಪುರದ ಕುರಿತು ಪ್ರಧಾನಿ ಸಂಪೂರ್ಣ ಮೌನ ವಹಿಸಿದ್ದಾರೆ: ಜೈರಾಮ್ ರಮೇಶ್
ಜೈರಾಮ್ ರಮೇಶ್ | Photo: PTI
ಹೊಸದಿಲ್ಲಿ: ಮಣಿಪುರದ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ‘‘ಸಂಪೂರ್ಣ ಮೌನ’’ ವಹಿಸುವುದನ್ನು ಮುಂದುವರಿಸಿದ್ದಾರೆ ಎಂದು ಜೈರಾಮ್ ರಮೇಶ್ ರವಿವಾರ ಹೇಳಿದ್ದಾರೆ.
ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ತನ್ನ ‘ಎಕ್ಸ್’ನ ಪೋಸ್ಟ್ ನಲ್ಲಿ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿರುವ ಕುರಿತ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿದ್ದಾರೆ. ಅಲ್ಲದೆ, ಮಣಿಪುರ ಹಿಂಸಾಚಾರ ಆರಂಭವಾಗಿ 9 ತಿಂಗಳು ಕಳೆದರೂ ಪ್ರಧಾನಿ ಅವರು ಸಂಪೂರ್ಣ ಮೌನ ವಹಿಸಿದ್ದಾರೆ. ಪ್ರಧಾನಿ ಅವರು ರೋಡ್ ಶೋಗೆ ಗುವಾಹಟಿಗೆ ಹೋಗಿದ್ದರು. ಆದರೆ, ಇಂಫಾಲಕ್ಕೆ ಭೇಟಿ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ಪ್ರಧಾನಿ ಅವರು ಮಣಿಪುರದ ಜನರಿಗೆ ಅನ್ಯಾಯ ಮಾಡಿದರು ಎಂದು ಅವರು ಹೇಳಿದ್ದಾರೆ.
ಅಮಿತ್ ಶಾ ಅವರನ್ನು ಭೇಟಿಯಾದ ಬಳಿಕ ಬಿರೇನ್ ಸಿಂಗ್ ಅವರು, ಮಣಿಪುರ ಜನರ ಹಿತಾಸಕ್ತಿಗೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದರು.