ಪ್ರಧಾನಿ ಮೋದಿ ಕೇವಲ ತನ್ನ ‘ಮನ್ ಕಿ ಬಾತ್’ ಕುರಿತು ಮಾತನಾಡುತ್ತಾರೆ, ‘ಕಾಮ್ ಕಿ ಬಾತ್’ ಅಲ್ಲ : ರಾಹುಲ್ ಗಾಂಧಿ
ರಾಹುಲ್ ಗಾಂಧಿ | PC : PTI
ಶ್ರೀನಗರ : ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸೋಮವಾರ ಇಲ್ಲಿ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಅವರು ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಬದಲು ತನ್ನ ‘ಮನ್ ಕಿ ಬಾತ್’ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದಾರೆ ಎಂದು ಆರೋಪಿಸಿದರು.
ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್, ಮೋದಿ ಕೇವಲ ತನ್ನ ‘ಮನ್ಕಿ ಬಾತ್’ ಕುರಿತು ಮಾತನಾಡುತ್ತಾರೆ. ಉದ್ಯೋಗಗಳನ್ನು ಒದಗಿಸುವುದು ಮತ್ತು ಬೆಲೆಯೇರಿಕೆ ನಿಯಂತ್ರಿಸುವುದು ಸೇರಿದಂತೆ ‘ಕಾಮ್ ಕಿ ಬಾತ್’ ಕುರಿತು ಅಲ್ಲ ಎಂದರು.
ಬದಲಾಗುತ್ತಿರುವ ರಾಜಕೀಯ ವಾತಾವರಣವನ್ನು ಬೆಟ್ಟು ಮಾಡಿದ ಅವರು, ಲೋಕಸಭಾ ಚುನಾವಣೆಗಳಿಗೆ ಮೊದಲು ನೀವು ಮೋದಿಯವರ ‘56 ಇಂಚಿನ ಎದೆ’ಯ ಬಗ್ಗೆ ಕೇಳಿರಲೇಬೇಕು. ಆದರೆ ಈ ದಿನಗಳಲ್ಲಿ ಅವರನ್ನು ನೀವು ಗಮನಿಸಿದ್ದೀರಾ? ಮೂಡ್ ಬದಲಾಗಿದೆ. ಇಂಡಿಯಾ ಮೈತ್ರಿಕೂಟ ಮತ್ತು ಕಾಂಗ್ರೆಸ್ ಮೋದಿಯವರ ಮಾನಸಿಕತೆಯನ್ನು ಬದಲಿಸಿವೆ ಎಂದರು.
ಇಂಡಿಯಾ ಮೈತ್ರಿಕೂಟ ಮತ್ತು ಕಾಂಗ್ರೆಸ್ನ ಹೆಚ್ಚುತ್ತಿರುವ ಪ್ರಭಾವ ಹಾಗೂ ಈ ದೇಶದ ಜನರಿಂದಿಂದಾಗಿ ಮೋದಿಯವರ ವರ್ತನೆ ಬದಲಾಗಿದೆ. ಅವರ ಮುಖ, ಮನಃಸ್ಥಿತಿ ಎಲ್ಲವೂ ಬದಲಾಗಿವೆ ಎಂದು ಹೇಳಿದರು.
ಮೋದಿ ಮತ್ತು ಬಿಜೆಪಿ ದೇಶಾದ್ಯಂತ ಒಡಕನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ ರಾಹುಲ್, ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮತ್ತು ಬಿಜೆಪಿ ಹೋದಲ್ಲೆಲ್ಲ ದ್ವೇಷವನ್ನು ಹರಡಿದ್ದಾರೆ. ಸೋದರರು ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡಿದ್ದಾರೆ. ಧರ್ಮಗಳು ಪರಸ್ಪರ ಕಾದಾಡುವಂತೆ ಮಾಡಿದ್ದಾರೆ ಎಂದರು.
ಹೆಚ್ಚುತ್ತಿರುವ ನಿರುದ್ಯೋಗದ ಕುರಿತು ಮಾತನಾಡಿದ ಅವರು, ವಿದ್ಯಾವಂತರಿಗೆ ಉದ್ಯೋಗಗಳನ್ನು ಒದಗಿಸುವಲ್ಲಿ ವೈಫಲ್ಯಕ್ಕಾಗಿ ಸರಕಾರವನ್ನು ಟೀಕಿಸಿದರು. ವಿದ್ಯಾವಂತರಿಗೆ ಉದ್ಯೋಗಗಳು ದೊರೆಯುತ್ತಿಲ್ಲ,ದೇಶಾದ್ಯಂತ ನಿರುದ್ಯೋಗ ಹೆಚ್ಚುತ್ತಿದೆ. ಇದು ನರೇಂದ್ರ ಮೋದಿಯವರ ಉಡುಗೊರೆಯಾಗಿದೆ ಎಂದರು.
ಜಮ್ಮು-ಕಾಶ್ಮೀರವನ್ನು ರಾಜ್ಯಮಟ್ಟದಿಂದ ಕೇಂದ್ರಾಡಳಿತ ಪ್ರದೇಶದ ಮಟ್ಟಕ್ಕೆ ಇಳಿಸುವ ಮೂಲಕ ಪ್ರದೇಶದಲ್ಲಿಯ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಿದ ರಾಹುಲ್, ಈ ಪ್ರದೇಶದ ಜನರು ಸಂಪೂರ್ಣ ರಾಜ್ಯ ಸ್ಥಾನಮಾನ ಮರುಸ್ಥಾಪನೆಗೆ ಅರ್ಹರಾಗಿದ್ದಾರೆ ಎಂದರು.
ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಮೊದಲ ಹಂತ ಸೆ.18ರಂದು ನಡೆದಿದ್ದು, ಎರಡನೇ ಮತ್ತು ಮೂರನೇ ಹಂತದ ಮತದಾನಗಳು ಸೆ.25 ಮತ್ತು ಅ.1ರಂದು ನಡೆಯಲಿವೆ. ಅ.8ರಂದು ಫಲಿತಾಂಶಗಳು ಪ್ರಕಟಗೊಳ್ಳಲಿವೆ.